ಮಂಗಳೂರು: ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು ನಾಗಾರಾಧನೆಗಾಗಿ ಹಿಂದೂ ಕುಟುಂಬವೊಂದಕ್ಕೆ ಸುಮಾರು 20 ಸೆಂಟ್ಸ್ ಭೂಮಿ ಬಿಟ್ಟುಕೊಟ್ಟು ಕೋಮು ಸೌಹಾರ್ದತೆ ಮೆರೆದಿದ್ದಾರೆ. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದಲ್ಲಿ ಖಾದರ್‌ಗೆ ಸೇರಿದ ಪಿತ್ರಾರ್ಜಿತ ಆಸ್ತಿ ಇದೆ. ಈ ಜಾಗವನ್ನು ಅವರ ತಂದೆಯ ತಂಗಿ ಮಗ ಅಬ್ದುಲ್ ರಹ್ಮಾನ್ ನೋಡಿಕೊಳ್ಳುತ್ತಾರೆ. ಖಾದರ್ ಅವರಿಗೆ ಸೇರಿದ ಜಾಗದಲ್ಲಿ ಒಂದೆಡೆ ಹಳೆಯ ನಾಗಬನ ಇತ್ತು. ಆದರೆ, ಅದಕ್ಕೆ ಯಾವುದೇ ಪೂಜೆ ನಡೆಯುತ್ತಿರಲಿಲ್ಲ. ಈ ಜಾಗವನ್ನು ಹಾಗೇ ಬಿಡಲಾಗಿತ್ತು.
ಅಷ್ಟಮಂಗಲ ಪ್ರಶ್ನೆ: ರಾಮಕ್ಷತ್ರೀಯ ಜಾತಿಗೆ ಸೇರಿದ ದೊಡ್ಡ ಮನೆ ಕುಟುಂಬ ಭಾರೀ ಸಂಕಷ್ಟಕ್ಕೆ ಸಿಲುಕಿತ್ತು. ಈ ಕುಟುಂಬ ಅಷ್ಟಮಂಗಲವಿಟ್ಟು ಪ್ರಶ್ನಿಸುವಾಗ ನಾಗಬನದಲ್ಲಿ ಪೂಜೆಗಳು ನಡೆಯದೇ ಇರುವುದು ಕಂಡುಬಂದಿತ್ತು. ಅಷ್ಟಮಂಗಲದಲ್ಲಿ ದೊಡ್ಡ ಮನೆ ಕುಟುಂಬದ ನಾಗಬನ ಪುಣಚದಲ್ಲಿರುವುದು ಕಂಡುಬಂದಿದೆ. ಈ ನಾಗಬನವನ್ನು ಪರಿಶೀಲಿಸಿದಾಗ ಬನದ ಜಾಗ ಖಾದರ್ ಅವರಿಗೆ ಸೇರಿದ್ದೆಂದು ತಿಳಿದುಬಂದಿದೆ.
ದೊಡ್ಡ ಮನೆ ಕುಟುಂಬದ ಹಿರಿಯರಾದ ಮಾಜಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್ ಅವರು ಈ ಜಾಗ ನೋಡಿಕೊಳ್ಳುತ್ತಿರುವ ಅಬ್ದುಲ್ ಅವರಲ್ಲಿ ವಿಚಾರ ತಿಳಿಸಿದಾಗ, ಅವರು ಖಾದರ್ ಅವರನ್ನು ಭೇಟಿ ಮಾಡಿಸಿದ್ದಲ್ಲದೇ ಎಲ್ಲ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಸೂಕ್ಷ್ಮತೆ ಅರಿತ ಖಾದರ್ ಕೂಡಲೇ ನಾಗಬನಕ್ಕೆ ಬೇಕಾದ ಜಾಗವನ್ನು ಆ ಕುಟುಂಬಕ್ಕೆ ಉಚಿತವಾಗಿ ನೀಡಿದ್ದಾರೆ. ಇದು ನಡೆದು 12 ವರ್ಷಗಳಾಗಿದೆ. ಆ ಬಳಿಕ ಆ ಸ್ಥಳವನ್ನು ದೊಡ್ಡಮನೆ ಕುಟುಂಬದಿಂದ ಅಭಿವೃದ್ದಿಪಡಿಸಲಾಯಿತು. ವರ್ಷಂಪ್ರತಿ ದೊಡ್ಡ ಮನೆ ಕುಟುಂಬದವರು ನಾಗರಪಂಚಮಿ ದಿನ ಇಲ್ಲಿಗೆ ಬಂದು ನಾಗದೇವರಿಗೆ ತನು ಸಮರ್ಪಿಸಿ ಪೂಜೆ ಸಲ್ಲಿಸುತ್ತಾರೆ.
ದೊಡ್ಡ ಮನೆ ಕುಟುಂಬದ ರವಿರಾಜ್, ”1715ರಲ್ಲಿ ಕೆಳದಿಯಿಂದ ಬಂದ ಕುಟುಂಬ ನಮ್ಮದು. ನಮ್ಮ ಹಿರಿಯಜ್ಜ ಕೆಳದಿ ಅರಸರ ದಳವಾಯಿ ಆಗಿದ್ದರು. ವಿಟ್ಲ ಅರಸರಿಗೆ ಕೆಳದಿ ಅರಸರಿಂದ ಸಮಸ್ಯೆಯಾದಾಗ ನಮ್ಮ ಹಿರಿಯಜ್ಜ ವಿಟ್ಲ ಅರಸರನ್ನು ಪಾರು ಮಾಡಿದ್ದರು. ಆಗ ವಿಟ್ಲ ಅರಸರು ಪುಣಚ ಗ್ರಾಮವನ್ನು ಉಂಬಳಿ ಕೊಟ್ಟಿದ್ದರು. ಕಾಲಕ್ರಮೇಣ ನಮ್ಮ ಕುಟುಂಬಗಳು ಚೆಲ್ಲಾಪಿಲ್ಲಿಯಾದವು. ಕುಟುಂಬಿಕರಿಗೆ ಸಮಸ್ಯೆಗಳು ಎದುರಾದಾಗ ಅಷ್ಟಮಂಗಲ ಪ್ರಶ್ನೆಯನ್ನಿರಿಸಲಾಯಿತು. ಆಗ ಪುಣಚದಲ್ಲಿ ನಮ್ಮ ಕುಟುಂಬಕ್ಕೆ ಸೇರಿದ ನಾಗಬನ ಇದೆ ಎಂಬುದು ತಿಳಿದುಬಂತು. ಆದರೆ, ಅದು ಯು.ಟಿ.ಖಾದರ್ ಅವರ ಬಳಿ ಇತ್ತು. ಅಬ್ದುಲ್ ರಹ್ಮಾನ್ ಅವರ ಮೂಲಕ ಖಾದರ್ ಅವರನ್ನು ಸಂಪರ್ಕಿಸಿದಾಗ ಅವರು ತುಂಬು ಮನಸ್ಸಿನಿಂದ ನಾಗಬನ ಇರುವ ಜಾಗವನ್ನು ನಮಗೆ ಬಿಟ್ಟುಕೊಟ್ಟಿದ್ದಾರೆ. ಆ ಬಳಿಕ ಇಲ್ಲಿ ಅಭಿವೃದ್ದಿ ಕಾರ್ಯ ಮಾಡಿ ನಾಗದೇವರ ಆರಾಧನೆ ಮಾಡಲಾಗುತ್ತಿದೆ” ಎಂದು ಹೇಳಿದರು.
ಯು.ಟಿ.ಖಾದರ್ ಅವರ ಬಾವ ಅಬ್ದುಲ್ ರಹ್ಮಾನ್, ”ನಮ್ಮ ಅಜ್ಜನವರ ಕಾಲದಲ್ಲಿದ್ದ ಆಸ್ತಿ ಇದು. ಇದು ಖಾದರ್ ಅವರ ತಂದೆಗೆ ಆಸ್ತಿಪಾಲು ಬಂತು. ಬಳಿಕ ಇದು ಖಾದರ್ ಅವರಿಗೆ ಆಸ್ತಿ ಪಾಲಿನಲ್ಲಿ ಬಂತು. ಈ ಜಾಗದಲ್ಲಿ ಒಂದು ನಾಗಬನ ಇತ್ತು. ಇದನ್ನು ಹುಡುಕಿಕೊಂಡು ರವಿರಾಜ್ ಎಂಬವರು ಬಂದಿದ್ದರು. ಖಾದರ್ ಅವರ ಬಳಿಗೆ ಕರೆದುಕೊಂಡು ಹೋದಾಗ ಅವರು ಈ ಜಾಗವನ್ನು ಅವರಿಗೆ ಉಚಿತವಾಗಿ ನೀಡಿದರು. ಇದೀಗ ನಾಗರ ಪಂಚಮಿ ದಿನ ಬಂದು ಪೂಜೆ ಸಲ್ಲಿಸುತ್ತಾರೆ. ನಮಗೂ ಈ ಜಾಗವನ್ನು ಕೊಟ್ಟು ಸಂತಸವಾಗಿದೆ. ಖಾದರ್ ಅವರು ಅದನ್ನು ಕೇಳಿದ ಕೂಡಲೇ ಉಚಿತವಾಗಿ ಕೊಟ್ಟಿದ್ದಾರೆ” ಎಂದರು.
ನಾಗಬನ ಇರುವ ಜಾಗವು ದೊಡ್ಡಮನೆ ಕುಟುಂಬಕ್ಕೆ ನೀಡುವವರೆಗೆ ಅಲ್ಲಿ ಯಾವುದೇ ಪೂಜೆಗಳು ನಡೆಯುತ್ತಿರಲಿಲ್ಲ. ಆದರೆ, ದೊಡ್ಡ ಮನೆ ಕುಟುಂಬಕ್ಕೆ ಜಾಗ ನೀಡಿದ ಬಳಿಕ ಅಲ್ಲಿ ನಾಗಾರಾಧನೆ ನಡೆಯುತ್ತಿದ್ದು, ಇದೀಗ ಈ ಜಾಗದಲ್ಲಿ ಅತ್ಯಂತ ಸಡಗರ ಸಂಭ್ರಮದಲ್ಲಿ ನಾಗಾರಾಧನೆ ಮಾಡುತ್ತಿದೆ.
Discussion about this post