ಮುಂಬೈ:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಬೆನ್ನಲೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಡೀಪ್‌ಫೇಕ್ ಚಿತ್ರ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕತ್ರಿನಾ ಕೈಫ್ ಅವರ ಮುಂಬರುವ ‘ಟೈಗರ್ 3’ ಚಿತ್ರದಲ್ಲಿ ನಟಿ ಕತ್ರಿನಾ ಅವರು ಬಿಳಿ ಟವಲೊಂದನ್ನು ಹಿಡಿದಿರುವ ದೃಶ್ಯದಲ್ಲಿ ಹಾಲಿವುಡ್‌ನ ಸ್ಟಂಟ್ ವುಮನ್‌ವೊಬ್ಬರ ಜೊತೆ ಬಹುತೇಕ ಅರೆಬೆತ್ತಲೆಯಾಗಿ ನಟಿಸಿದ್ದಾರೆ. ಈ ಮೂಲ ಪೋಟೋವನ್ನು ತಿರುಚಿ, ಟವಲ್ ಬದಲಿಗೆ ಅವರು ಬಿಳಿ ಬಿಕಿನಿ ಧರಿಸಿರುವಂತೆ ಅಸಭ್ಯವಾಗಿ ರೂಪಿಸಲಾಗಿದೆ. ಈ ಫೋಟೊ ವಿರುದ್ದ ಹಲವರು ಕಿಡಿಕಾರಿದ್ದು, ಕೃತಕ ಬುದ್ಧಿಮತ್ತೆಯು ಭಯಾನಕವಾಗಿದೆ ಹಾಗೂ ಅದನ್ನು ಮಹಿಳೆಯರನ್ನು ಅಶ್ಲೀಲಗೊಳಿಸಲು ಬಳಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದಿದ್ದಾರೆ.
ತಂತ್ರಜ್ಞಾನವನ್ನು ದುರುದ್ದೇಶಕ್ಕಾಗಿ ಬಳಸಿರುವುದರ ವಿರುದ್ಧ ಅಭಿಮಾನಿಗಳು, ಚಿತ್ರನಟರು ಮತ್ತು ಇತರ ಗಣ್ಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಎಐ ತಂತ್ರಜ್ಞಾನ ಬಳಸಿ ಚಿತ್ರ ಅಥವಾ ವಿಡಿಯೊ ತಿರುಚುವುದನ್ನು ಡೀಪ್‌ಫೇಕ್ ತಂತ್ರಜ್ಞಾನ ಎನ್ನುತ್ತಾರೆ.
‘ಫೇಕ್’ ವಿರುದ್ಧ ಕೇಂದ್ರ ಸರ್ಕಾರದ ಯುದ್ಧ: ಅಳಿಸಲು 24 ಗಂಟೆ ಗಡುವು : ನವದೆಹಲಿ: ನಟಿ ರಶ್ಮಿಕಾ ಮಂದಣ್ಣರ ಡೀಪ್ ಫೇಕ್ ವಿಡಿಯೋ (Deep Fake video) ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಿಗೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿರುವ ಕೇಂದ್ರ ಸರ್ಕಾರ, ಇಂಥ ನಕಲಿ ಫೋಟೋ, ವಿಡಿಯೋ, ಕುರಿತು ದೂರು ಸಲ್ಲಿಕೆಯಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದು ಹಾಕಬೇಕು ಎಂದು ಗಡುವು ನೀಡಿದೆ, ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಈ ಕುರಿತು ಕೆಲ ಅಂಶಗಳ ಕುರಿತು ಮತ್ತೊಮ್ಮೆ ಸಲಹಾವಳಿ ಬಿಡುಗಡೆ ಮಾಡಿರುವ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ‘ತಿರುಚಿದ ಪೋಟೋ, ವಿಡಿಯೋ ಕುರಿತು ದೂರು ದಾಖಲಾದ 24 ಗಂಟೆಗಳಲ್ಲಿ ಅವುಗಳನ್ನು ತೆಗೆದುಹಾಕಬೇಕು. ಇಲ್ಲದೆ ಹೋದಲ್ಲಿ 3 ವರ್ಷ ಜೈಲು ಮತ್ತು 1 ಲಕ್ಷ ರು. ದಂಡ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಈ ವಿಡಿಯೋ ಕುರಿತು ಸೋಮವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಮಾಹಿತಿ ತಂತ್ರ ಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಸಾಮಾಜಿಕ ಜಾಲತಾಣಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಮ್ಮ ಕಾನೂನು ಬಾಧ್ಯತೆಯನ್ನು ಪೂರೈಸಬೇಕು ಎಂದು ಎಚ್ಚರಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post