ಉಪ್ಪಿನಂಗಡಿ: ಕಂಟೈನರ್ ಒಂದನ್ನು ಕಾರೊಂದು ಓವರ್ ಟೇಕ್ ಮಾಡುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮಠ ಪಂಜಳ ಎಂಬಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ.
ಘಟನೆಯಿಂದ ಮೂವರಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಉಪ್ಪಿನಂಗಡಿಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಕಂಟೈನರ್ ಲಾರಿಯನ್ನು ಕಾರೊಂದು ಓವರ್ ಟೇಕ್ ಮಾಡುತ್ತಿದ್ದಾಗ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಡಿಕ್ಕಿ ಹೊಡೆದ ಲಾರಿ ಮತ್ತು ಎಡಬದಿಯಲ್ಲಿ ಹೋಗುತ್ತಿದ್ದ ಕಂಟೈನರ್ ಮಗುಚಿ ಬಿದ್ದಿದೆ.
ತಕ್ಷಣ ಸ್ಥಳೀಯರು ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವಿಷಯ ತಿಳಿದ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Discussion about this post