ಕೊಟ್ಟಾಯಂ: ಕೇರಳದಲ್ಲಿ ಸೆಕ್ಸ್ ಗಾಗಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದ ದೊಡ್ಡ ಜಾಲ ಪತ್ತೆಯಾಗಿದ್ದು, ಈ ಸಂಬಂಧ ಕೊಟ್ಟಾಯಂ ಜಿಲ್ಲೆಯ ವೈಫ್ ಸ್ವ್ಯಾಪಿಂಗ್ ಗ್ಯಾಂಗ್ ನ ಏಳು ಮಂದಿಯನ್ನು ಕರುಕಾಚಲ ಪೊಲೀಸರು ಬಂಧಿಸಿದ್ದಾರೆ.
ಚಂಗನಾಸೆರಿಯ ಮಹಿಳೆಯೊಬ್ಬರು ಕೊಟ್ಟಾಯಂ ಜಿಲ್ಲೆಯ ಕರುಕಾಚಲ ಪೊಲೀಸರಿಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸೆಕ್ಸ್ ಗಾಗಿ ಪತ್ನಿಯರನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ಏಳು ಜನರನ್ನು ಬಂಧಿಸಿದ್ದಾರೆ. ಬಂಧಿತರು ಅಲಪ್ಪುಳ, ಕೊಟ್ಟಾಯಂ ಮತ್ತು ಎರ್ನಾಕುಲಂ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ದೂರು ನೀಡಿದ ಮಹಿಳೆ ಗೃಹಿಣಿಯಾಗಿದ್ದು, ‘ಕಪಲ್ ಶೇರಿಂಗ್’ ಗುಂಪಿನ ಭಾಗವಾಗಿದ್ದ ತನ್ನ ಪತಿ ವಿರುದ್ಧ ದೂರು ನೀಡಿದ್ದಾರೆ. ತನ್ನ ಪತಿ ಬೇರೊಬ್ಬ ಪುರುಷನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ಪತಿಯಿಂದಾಗಿ ತಾನು ಅಸ್ವಾಭಾವಿಕ ಲೈಂಗಿಕತೆಗೆ ಒಳಪಟ್ಟಿರುವುದಾಗಿ ಮಹಿಳೆ ಹೇಳಿಕೊಂಡಿದ್ದಾರೆ. ಆಕೆಯ ಪತಿ ಮತ್ತು ಆತನ ಸ್ನೇಹಿತರ ಬಂಧನದ ನಂತರ ಪೋಲೀಸರನ್ನು ‘ಕಪಲ್ ಹಂಚಿಕೆ’ಯ ದೊಡ್ಡ ಜಾಲವನ್ನೇ ಬಯಲು ಮಾಡಿದ್ದಾರೆ.
ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದ್ದು, 25ಕ್ಕೂ ಹೆಚ್ಚು ಮಂದಿ ಮೇಲೆ ನಿಗಾ ವಹಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಹೆಚ್ಚಿನವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗ್ಯಾಂಗ್ ಫೇಸ್ಬುಕ್ ಮೆಸೆಂಜರ್ ಮತ್ತು ಟೆಲಿಗ್ರಾಮ್ ಗ್ರೂಪ್ಗಳ ಮೂಲಕ ಕೆಲಸ ಮಾಡುತ್ತಿತ್ತು. ಈ ಗ್ರೂಪ್ ಗಳಲ್ಲಿ ಪತ್ನಿಯರನ್ನು ಪರಸ್ಪರ ಹಂಚಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. 1,000ಕ್ಕೂ ಹೆಚ್ಚು ದಂಪತಿಗಳು ಈ ಗುಂಪುಗಳಲ್ಲಿದ್ದಾರೆ ಮತ್ತು ಅವರು ಮಹಿಳೆಯರನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.