ಮಂಗಳೂರು: ಗೋವಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಮಾದಕ ವಸ್ತು ಪೂರೈಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ, 738 ಗ್ರಾಂ ತೂಕದ 73 ಲಕ್ಷ ರೂ. ಮೌಲ್ಯದ “ಹೈಡ್ರೋ ವೀಡ್ ಗಾಂಜಾ’ವನ್ನು ಕಾರು ಸಹಿತ ವಶಪಡಿಸಿಕೊಂಡಿದ್ದಾರೆ.
ಕೇರಳ ಕೋಝಿಕ್ಕೋಡ್‌ನ ಕಂದಲಾಡ್ ಓರಂಗ್‌ಕುನ್ನು ನಿವಾಸಿ ಕೋಯಾ ಎಂಬವರ ಪುತ್ರ ಶಮೀರ್ ಪಿ.ಕೆ.(42) ಬಂಧಿತ. ಈತ ಕೆಂಪು ಬಣ್ಣದ ಹುಂಡೈ ಕಾರಿನಲ್ಲಿ 73 ಲಕ್ಷ ಮೌಲ್ಯದ ಹೈಡ್ರೋವೀಡ್ ಗಾಂಜಾವನ್ನು ಗೋವಾದಿಂದ ಮಂಗಳೂರಿಗೆ ತರುತ್ತಿದ್ದಾನೆಂಬ ಖಚಿತ ಮಾಹಿತಿಯೊಂದಿಗೆ ಪೊಲೀಸರು ಮುಲ್ಕಿ ಬಪ್ಪನಾಡು ಬಳಿ ಅಡ್ಡಹಾಕಿದ್ದು ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 73 ಲಕ್ಷ ಮೌಲ್ಯದ 738 ಗ್ರಾಮ್ ತೂಕದ ಹೈಡ್ರೋವೀಡ್ ಗಾಂಜಾ, ಸಾಗಾಟಕ್ಕೆ ಬಳಸಿದ ಹುಂಡೈ ಕಾರು, ಮೊಬೈಲ್ ಸಹಿತ ಒಟ್ಟು 80 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಶ್ಯಾಮಸುಂದರ್, ಪಿಎಸ್ಐ ಶರಣಪ್ಪ ಭಂಡಾರಿ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಹೈಡ್ರೋವೀಡ್ ಗಾಂಜಾ ಎಂದರೆ…?
ಸಾಮಾನ್ಯ ಗಾಂಜಾವನ್ನು ನೆಲದಲ್ಲಿ ಬೆಳೆಯುವುದಾದರೆ ಹೈಡ್ರೋ ವೀಡ್ ಗಾಂಜಾವನ್ನು ಮಣ್ಣಿನ ಸಹಾಯವಿಲ್ಲದೆ ಬೆಳೆಯಲಾಗುತ್ತದೆ. ಇತರ ಕೆಲವು ಸೊಪ್ಪು ತರಕಾರಿಗಳನ್ನು ಹೈಡ್ರೋಪೋನಿಕ್ಸ್ ವಿಧಾನದಲ್ಲಿ ನೀರು ಹಾಗೂ ಜಲ ರಸಗೊಬ್ಬರ ಬಳಸಿ ಬೆಳೆಸುವಂತೆ ಗಾಂಜಾವನ್ನೂ ಬೆಳೆಸುತ್ತಾರೆ. ಇದನ್ನು ಬಳಸುವವರ ಮೇಲೆಯೂ ಪರಿಣಾಮ ಹೆಚ್ಚು, ಇದರಿಂದ ಸಿಗುವ ಕಿಕ್ ಕೂಡ ಜಾಸ್ತಿ. ಹಾಗಾಗಿ ಬೇಡಿಕೆ ಹಾಗೂ ದರವೂ ಹೆಚ್ಚು ಎಂದು ತಿಳಿದುಬಂದಿದೆ. ಇದನ್ನು ಭಾರತದಲ್ಲಿ ಬೆಳೆಯುವುದು ಕಡಿಮೆ, ಹೆಚ್ಚಾಗಿ ಥಾçಲ್ಯಾಂಡ್‌ನಿಂದ ಆಮದಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post