ಮಂಗಳೂರು: ವಾಮಂಜೂರು ಮೂಡುಶೆಡ್ಡೆಯಲ್ಲಿ ಪಿಸ್ತೂಲಿನಿಂದ ಗುಂಡು ಹಾರಿ ವ್ಯಕ್ತಿ ಗಾಯಗೊಂಡ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಈ ಸಂಬಂಧ ಕುಖ್ಯಾತ ರೌಡಿಗಳಾದ ಬದ್ರುದ್ದೀನ್ ಮತ್ತು ಇಮ್ರಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜ.6ರಂದು ಮೂಡುಶೆಡ್ಡೆಯ ಬದ್ರುದ್ದೀನ್‌ನ ಸೆಕೆಂಡ್ ಹ್ಯಾಂಡ್ ಸೇಲ್ ಅಂಗಡಿಯಲ್ಲಿ ಗುಂಡು ಸಿಡಿದು ಓರ್ವ ಗಾಯಗೊಂಡಿದ್ದರು. ಬಂಧಿತರಿಬ್ಬರೂ ನಿಷೇಧಿತ ಪಿಎಫ್‌ಐ ಸಂಘಟನೆ ಮುಖಂಡರಾಗಿದ್ದು, ಇವರಲ್ಲಿದ್ದ ಪಿಸ್ತೂಲ್‌ಗೆ ಲೈಸೆನ್ಸ್ ಇರಲಿಲ್ಲ ಎಂದು ತಿಳಿದುಬಂದಿದೆ. ಬದ್ರುದ್ದೀನ್ ಹೊಂದಿದ್ದ ಅಕ್ರಮ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡುಹಾರಿದ್ದು, ಪ್ರಿಂಟರ್‌ಗೆ ತಗಲಿ ಮುಂಭಾಗದಲ್ಲಿ ಕುಳಿತಿದ್ದ ಸ್ಥಳೀಯ ಮಸೀದಿಯ ಧರ್ಮಗುರು ಮೊಹಮ್ಮದ್ ಸಫ್ವಾನ್ ಎಂಬಾತನ ಹೊಟ್ಟೆಗೆ ತಾಗಿ ಆತ ಗಂಭೀರ ಗಾಯಗೊಂಡಿದ್ದ.
ಈ ಪ್ರಕರಣವನ್ನು ತಿರುಚಲು ಗಾಯಾಳು ಸಫ್ವಾನ್ ಯತ್ನಿಸಿದ್ದು, ತನ್ನ ಕೈನಿಂದಲೇ ಗುಂಡು ಹಾರಿತ್ತು ಹಾಗೂ ಪಿಸ್ತೂಲ್ ಅನ್ನು ಭಾಸ್ಕರ್ ಎಂಬಾತ ನೀಡಿದ್ದಾಗಿ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದ್ದರು. ಎಫ್‌ಎಸ್‌ಎಲ್ ಮತ್ತು ಬ್ಯಾಲಿಸ್ಟಿಕ್ ವಿಭಾಗದ ಅಧಿಕಾರಿಗಳೂ ತನಿಖೆ ನಡೆಸಿದಾಗ ಸ್ವಯಂ ಆಗಿ ಗುಂಡು ಹಾರಿಸಿದಾಗ ಈ ರೀತಿ ಗಾಯವಾಗುವುದಿಲ್ಲ ಎನ್ನುವುದು ಗೊತ್ತಾಗಿದೆ. ಅಲ್ಲದೆ ಪ್ರತ್ಯಕ್ಷದರ್ಶಿಗಳ ವಿಚಾರಣೆ ಹಾಗೂ ಸಿಸಿಟಿವಿ ತುಣುಕುಗಳನ್ನು ಪರಿಶೀಲಿಸಿದಾಗ ವಾಸ್ತವಾಂಶ ಬಹಿರಂಗಗೊಂಡಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬದ್ರುದ್ದೀನ್‌ಗೆ ಈ ಪಿಸ್ತೂಲನ್ನು ಇಮ್ರಾನ್ ನೀಡಿದ್ದ ಹಾಗೂ ಗಾಯಾಳು ಸಫ್ವಾನ್ ಕೂಡ ಪಿಎಫ್‌ಐ ಸದಸ್ಯ ಎಂದು ತಿಳಿದುಬಂದಿದೆ.
ಅಸಲಿ ಗುರಿ ಯಾರು?, ಇಷ್ಟಕ್ಕೂ ಈ ಪಿಸ್ತೂಲನ್ನು ರಹಸ್ಯವಾಗಿ ತಂದಿರಿಸಿದ್ದು ಯಾಕೆಂದು ಪ್ರಶ್ನೆ? ಮಂಗಳೂರಿನಲ್ಲಿ ಇವರ ಅಸಲಿ ಟಾರ್ಗೆಟ್ ಯಾರಾಗಿದ್ದರು ಎನ್ನುವ ಪ್ರಶ್ನೆಯೂ ಎದುರಾಗಿದೆ. ಪಿಎಫ್ಐ ದೇಶದ್ರೋಹಿ ಕೃತ್ಯಕ್ಕಾಗಿ ನಿಷೇಧಗೊಂಡಿದ್ದ ಹಿನ್ನೆಲೆಯಲ್ಲಿ ಕೇರಳದಿಂದ ಮಂಗಳೂರಿಗೆ ಗನ್ ತಂದಿಟ್ಟು ಯಾರ ಹೆಣ ಉರುಳಿಸುವ ಪ್ಲಾನ್ ಇತ್ತು ಎನ್ನುವ ಪ್ರಶ್ನೆ ಎದ್ದಿದೆ. ಈ ಹಿಂದೆಯೇ ಹಿಂದು ಸಂಘಟನೆ ನಾಯಕರು ಪಿಎಫ್ಐ ಹಿಟ್ ಲಿಸ್ಟ್ ನಲ್ಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈಗ ಪಿಎಫ್ಐ ನಂಟಿದ್ದವರ ಕೈಯಲ್ಲಿ ಅಕ್ರಮ ಪಿಸ್ತೂಲ್ ಇರುವುದು ಪತ್ತೆಯಾಗಿದ್ದು ಇವರ ಒಳಸಂಚನ್ನು ಬಯಲು ಮಾಡಿದೆ. ಅದಕ್ಕೇ ಹೇಳೋದು, ಮನುಷ್ಯ ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಎಂದು. ರೌಡಿಗಳು ದುಷ್ಟ ಕೂಟ ಕಟ್ಟಿಕೊಂಡು ಏನೋ ಮಾಡಲು ಹೋಗಿ ಎಡವಟ್ಟಾಗಿದ್ದು, ಆಕಸ್ಮಿಕವಾಗಿ ಸಿಡಿದ ಗುಂಡು ತಮ್ಮವರದ್ದೇ ಹೊಟ್ಟೆಯನ್ನು ಸೀಳಿ ಗುಟ್ಟನ್ನು ರಟ್ಟು ಮಾಡಿದೆ. ನಿಷೇಧಿತ ಪಿಎಫ್‌ಐ ಮುಖಂಡ ಪಿಸ್ತೂಲ್ ಇರಿಸಿಕೊಂಡದ್ದು ಯಾಕೆ ಹಾಗೂ ಈತನ ಅಸಲಿ ಗುರಿ ಯಾರು ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post