ಮಂಗಳೂರು, ಜ.10: ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ 176 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೆದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ಅಂಗವನ್ನು ದಾನ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡ ಗ್ರಾಮದ ನಿವಾಸಿ ರೇಖಾ(41) ಎಂಬವರ ಲಿವರ್ ಅನ್ನು ಮೈಸೂರಿಗೆ ಮತ್ತು ಕಣ್ಣಿನ ಕಾರ್ನಿಯಾಗಳನ್ನು ಅತ್ತಾವರ ಕೆಎಂಸಿ ಆಸ್ಪತ್ರೆಗೆ ನೀಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ರೇಖಾ (41) ಅವರ ಮೆದುಳು ನಿಷ್ಕ್ರಿಯವಾದ ಕಾರಣ ಅವರ ಅಂಗಾಂಗ ದಾನ ಮಾಡಲಾಯಿತು. ರೇಖಾ ಅವರಿಗೆ ಬ್ರೈನ್ ಟ್ಯೂಮರ್ ಇದ್ದಿದ್ದರಿಂದ ಶಿವಮೊಗ್ಗದ ಆಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಜನವರಿ 6ರಂದು ರೇಖಾ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ದಾಖಲಾದ ರೇಖಾ ಅವರ ಮೆದುಳು ನಿಷ್ಕ್ರಿಯವಾಗಿದ್ದರಿಂದ ಆಸ್ಪತ್ರೆಯ ವೈದ್ಯರು ಅಂಗಾಂಗ ದಾನದ ಸಲಹೆ ನೀಡಿದ್ದು, ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದರು.
ಅದರಂತೆ, ರೇಖಾ ಅವರ ಕಣ್ಣು ಮತ್ತು ಲಿವರ್ ತೆಗೆದು ದಾನ ಪ್ರಕ್ರಿಯೆ ನಡೆಸಲಾಯಿತು. ಎರಡು ಕಣ್ಣನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಲಿವರ್ ಅನ್ನು ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಮೂಲಕ ಮೃತ ಮಹಿಳೆ ರೇಖಾ ಮೂರು ಮಂದಿಯ ಬಾಳಿಗೆ ಬೆಳಕಾದರು.
ಈ ಬಗ್ಗೆ ಮಾತನಾಡಿದ ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ.ಶಿವಪ್ರಕಾಶ್, ”ರೇಖಾ ಅವರು ಜನವರಿ 6ರಂದು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮೆದುಳು ನಿಷ್ಕ್ರಿಯವಾದ ಪರಿಣಾಮ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಕಣ್ಣು ಮತ್ತು ಲಿವರ್ ದಾನ ಮಾಡಲಾಗಿದೆ. ಇದು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 176 ವರ್ಷಗಳ ಇತಿಹಾಸದಲ್ಲಿ ನಡೆದ ಮೊದಲ ಅಂಗಾಂಗ ದಾನವಾಗಿದೆ” ಎಂದರು.
ರೇಖಾ ಅವರದ್ದು ಬಡ ಕುಟುಂಬವಾಗಿದ್ದು, ಅಂಗಾಂಗ ದಾನ ಮಾಡಲು ಒಪ್ಪಿಗೆ ನೀಡಿದ್ದಕ್ಕಾಗಿ ವೆನ್ಲಾಕ್ ಆಸ್ಪತ್ರೆಯ ಡಿಎಂಓ ಡಾ.ಶಿವಪ್ರಕಾಶ್ ಕುಟುಂಬಸ್ಥರಿಗೆ ಧನ್ಯವಾದ ಹೇಳಿದರು. ಸಾವು ಎಲ್ಲರಿಗೂ ಬರುತ್ತದೆ, ಆದರೆ ಸಾವಿನ ಸಂದರ್ಭದಲ್ಲಿ ಅಂಗಾಂಗ ದಾನದ ಮೂಲಕ ಇನ್ನೊಬ್ಬರಿಗೆ ಜೀವ ಕೊಡುವುದು ಶ್ರೇಷ್ಠವಾದದ್ದು ಎಂದು ಶವವನ್ನು ಆಸ್ಪತ್ರೆಯಿಂದ ಬಿಟ್ಟು ಕೊಡುವ ಸಂದರ್ಭದಲ್ಲಿ ಡಾ.ಶಿವಪ್ರಕಾಶ್ ಅಭಿಪ್ರಾಯಪಟ್ಟರು. ಇದೇ ವೇಳೆ, ಐಎಂಎ ವೈದ್ಯರ ಸಂಘದ ಅಣ್ಣಯ್ಯ ಕುಲಾಲ್ ಮತ್ತು ಇತರ ವೈದ್ಯರು ಸೇರಿ ಬಡ ಕುಟುಂಬಕ್ಕೆ ಒಂದಷ್ಟು ಧನಸಹಾಯ ಮಾಡಿದ್ದಲ್ಲದೆ ಶಿವಮೊಗ್ಗಕ್ಕೆ ಶವ ಒಯ್ಯಲು ಆಂಬುಲೆನ್ಸ್ ಮಾಡಿಕೊಟ್ಟು ಅಂತ್ಯಕ್ರಿಯೆಗೆ ನೆರವಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post