ಉಪ್ಪಿನಂಗಡಿ: ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಹಿಳೆಯೋರ್ವರ ಬ್ಯಾಗಿನಿಂದ 114 ಗ್ರಾಂ ತೂಕದ ಚಿನ್ನಾಭರಣದ ಬಾಕ್ಸ್ ಎಗರಿಸಿದ್ದ ಪ್ರಕರಣವನ್ನು ಭೇದಿಸಿದ ಉಪ್ಪಿನಂಗಡಿ ಪೊಲೀಸರು, ಬಂಟ್ವಾಳ ತಾಲೂಕು ಕೊಮಿನಡ್ಕ ಮನೆ ನಿವಾಸಿ ನಸೀಮಾ (31) ಎಂಬಾಕೆಯನ್ನು ಬಂಧಿಸಿದ್ದಾರೆ. ಕಳವಿಗೀಡಾದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಡಬ ತಾಲೂಕು ಬಂಟ್ರ ಗ್ರಾಮದ ನೆಕ್ಕಿತ್ತಡ್ಕ ನಿವಾಸಿ ಮುಸ್ತಫಾ ಅವರ ಪತ್ನಿ ಅಬೀಬಾ ಅವರು ಭಾವನ ಪತ್ನಿ ಹಸೀರಾಬಾನು ಜತೆಗೆ ಜ. 6ರಂದು ಮದುವೆ ಕಾರ್ಯಕ್ರಮಕ್ಕೆ ಹೊರಡುವ ಮೊದಲು ಮನೆಯಲ್ಲಿದ್ದ ಅವರ ಸುಮಾರು 8 ಗ್ರಾಂ ತೂಕದ ಚಿನ್ನದ ನೆಕ್ಲೇಸ್ -1 ಮತ್ತು ಹಸೀರಾಬಾನುರವರ ಸುಮಾರು 106 ಗ್ರಾಂ ತೂಕದ ಚಿನ್ನಾಭರಣವನ್ನು ಒಂದು ಬಾಕ್ಸ್ ನೊಳಗಡೆ ಹಾಕಿ ವ್ಯಾನಿಟಿ ಬ್ಯಾಗಿನೊಳಗಡೆ ಇಟ್ಟುಕೊಂಡಿದ್ದರು. ಮದುವೆ ಮುಗಿಸಿ ಮನೆಗೆ ಬರುತ್ತಿದ್ದಾಗ ಬಸ್ಸಿನಲ್ಲಿ ಇವರ ಬ್ಯಾಗಿನ ಜಿಪ್ ತೆರೆದಿರುವುದು ಕಂಡು ಬಂದಿತ್ತು. ಪರಿಶೀಲಿಸಿದಾಗ ಅದರಲ್ಲಿದ್ದ ಚಿನ್ನದ ಬಾಕ್ಸ್ ಕಳವಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಬ್ಯಾಗ್ ಕಳವು ಮಾಡುವುದರಲ್ಲಿ ಕುಖ್ಯಾತಿ ಗಳಿಸಿದ್ದ ನಸೀಮಾಳನ್ನು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದಾಗ ಕಳವು ನಡೆಸಿರುವುದನ್ನು ಒಪ್ಪಿಕೊಂಡಳು. ಕಳವಾಗಿದ್ದ ಚಿನ್ನಾಭರಣಗಳನ್ನು ಆಕೆಯ ಸ್ಕೂಟಿಯಿಂದ ವಶಕ್ಕೆ ಪಡೆಯಲಾಗಿದೆ. ಮೂಲತಃ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿ ನಿವಾಸಿಯಾಗಿರುವ ನಸೀಮಾ 2021ರಿಂದ ಹಲವಾರು ಕಡೆ ಕಳವು ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ಆರಂಭಿಸಿದ ಉಪ್ಪಿನಂಗಡಿ ಸಿಐ ರವಿ ಬಿ. ಎಸ್. ಮತ್ತು ಎಸ್‌ಐ ಅವಿನಾಶ್ ಅವರ ತಂಡ ಉಪ್ಪಿನಂಗಡಿ ಪೇಟೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕೆಮರಾದ ಸಹಾಯದಿಂದ ಕಳ್ಳಿಯನ್ನು ಗುರುತಿಸಿದರು. ಉಪ್ಪಿನಂಗಡಿ ಯಲ್ಲಿ ಪಿಕ್ ಪಾಕೆಟ್ ಮಾಡಿ ಬೆಳ್ತಂಗಡಿ ಕಡೆಗೆ ಹೋಗುವ ಬಸ್ಸನ್ನೇರಿದ ಈಕೆ ಕಲ್ಲೇರಿಯಲ್ಲಿ ಇಳಿದು ರಿûಾವೊಂದರಲ್ಲಿ ಪಾಂಡವರಕಲ್ಲಿನತ್ತ ಸಂಚರಿಸಿದ್ದನ್ನು ಖಚಿತಪಡಿಸಿಕೊಂಡ ಪೊಲೀಸರು ನಸೀಮಾಳನ್ನು ವಶಪಡಿಸಿಕೊಂಡು ಸೊತ್ತು ಸ್ವಾಧೀನಪಡಿಸುವಲ್ಲಿ ಯಶಸ್ಸು ಸಾಧಿಸಿದರು. ವಿಚಾರಣೆಯ ವೇಳೆ 2021ರಿಂದಲೇ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post