ಮಂಗಳೂರು, ಫೆ.10: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಂತ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಶನಿವಾರ ಕೆಲವು ವಿದ್ಯಾರ್ಥಿಗಳ ಹೆತ್ತವರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲೆಗೆ ತೆರಳಿ ತರಾಟೆಗೆ ತೆಗೆದುಕೊಂಡರು.
ಶಾಲಾ ಶಿಕ್ಷಕಿಯೊಬ್ಬರು ಅಯೋಧ್ಯೆ ಮತ್ತು ರಾಮ ದೇವರ ಕುರಿತು ಅವಹೇಳನ ಮಾಡಿದ್ದು, ಮುತ್ತಿಗೆ ಹಾಕುವಂತೆ ಸೂಚಿಸುವ ಪೋಷಕರೊಬ್ಬರ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಾಹ್ನ 2 ಘಂಟೆಗೆ ಶಾಲಾ ಆವರಣದಲ್ಲಿ ಸೇರಬೇಕಾಗಿ ಸಂದೇಶ ರವಾನಿಸಲಾಗಿದ್ದು, ಆಡಿಯೋ ಹಾಗೂ ಸಂದೇಶ ವೈರಲ್ ಹಿನ್ನೆಲೆ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿದೆ.
ನಗರದ ವೆಲೆನ್ಸಿಯಾದಲ್ಲಿರುವ ಸಂತ ಜೆರೋಸಾ ಪ್ರಾಥಮಿಕ ಶಾಲೆಯ ಏಳನೇ ತರಗತಿ ಮಕ್ಕಳಿಗೆ ವರ್ಕ್ ಈಸ್ ವರ್ಶಿಪ್ ಎನ್ನುವ ಪಠ್ಯವಿದ್ದು, ಅದರ ನೆಪದಲ್ಲಿ ಹಿಂದು ಧರ್ಮವನ್ನು ನಿಂದಿಸಿ ತರಗತಿಯಲ್ಲಿ ಬೋಧನೆ ಮಾಡಿದ್ದಾರೆ. ಹಿಂದುಗಳಿಗೆ ಅಸ್ತಿತ್ವ ಇಲ್ಲ. ಭಾರತದಲ್ಲಿ ಮಾತ್ರ ಹಿಂದುಗಳಿದ್ದಾರೆ. ಹಿಂದುಗಳ ಹುಟ್ಟು ಎಲ್ಲಿಂದಲೇ ಇವರಿಗೆ ತಿಳಿದಿಲ್ಲ. ಅಯೋಧ್ಯೆಯಲ್ಲಿ ಕಲ್ಲಿನ ಮೂರ್ತಿ ಮಾಡಿ ಇಟ್ಟ ಕೂಡಲೇ ಅಲ್ಲಿಗೆ ರಾಮ ಬರುತ್ತಾನೆಯೇ..? ಮಸೀದಿಯನ್ನು ಒಡೆದು ಡೆಕೋರೇಶನ್ ಮಾಡಿ ಮಂದಿರ ಕಟ್ಟಬೇಕಿತ್ತೇ.? ರಾಮಾಯಣ, ರಾಮ ಎಲ್ಲ ಕಾಲ್ಪನಿಕ. ಅದನ್ನು ಹೇಗೆ ನಂಬುತ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟು ಮಕ್ಕಳಲ್ಲಿ ಹಿಂದು ಧರ್ಮದ ಬಗ್ಗೆ ಅಪನಂಬಿಕೆ ಬರುವ ರೀತಿ ಮಾಡಿದ್ದಾರೆಂದು ಆಡಿಯೋದಲ್ಲಿ ತನ್ನ ಮಗಳಿಗಾದ ಅನುಭವದ ಬಗ್ಗೆ ಪೋಷಕರೊಬ್ಬರು ಆಡಿಯೋ ಬಿಟ್ಟಿದ್ದಾರೆ. ಅಲ್ಲದೆ ಅವಹೇಳನದ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಲು ನಿರ್ಧರಿಸಿದ್ದು, ಎಲ್ಲಾ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಲಾ ಆವರಣದಲ್ಲಿ ಸೇರುವಂತೆ ಆಡಿಯೋದಲ್ಲಿ ಹೇಳಲಾಗಿದೆ.
ಅದರಂತೆ, ಶಾಲಾ ಆವರಣದಲ್ಲಿ ಕೆಲ ಹಿಂದೂ ಕಾರ್ಯಕರ್ತರು ಹಾಗೂ ಪೋಷಕರು ಜಮಾವಣೆಯಾಗಿದ್ದಾರೆ. ಶನಿವಾರ ಮಧ್ಯಾಹ್ನ ಬಳಿಕ ಶಾಲೆ ಬಂದ್ ಆಗಿದ್ದರೂ ಕೆಲ ಪೋಷಕರು, ಕಾರ್ಯಕರ್ತರು ಜಮಾಯಿಸಿದ್ದಾರೆ. ಶಿಕ್ಷಣ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ ಪೋಷಕರು ಹಾಗೂ ಕಾರ್ಯಕರ್ತರು, ಶಿಕ್ಷಕಿ ಸಿಸ್ಟರ್ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವಿಚಾರವಾಗಿ ಶಾಲೆಗೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡ ಐವನ್ ಡಿಸೋಜಾ ಅವರು ಆಡಳಿತ ಮಂಡಳಿ ಜೊತೆ ಮಾತನಾಡಿ ಜೆರೋಸಾಶಾಲೆ ಒಳಗಿನಿಂದ ಹೊರಬರುತ್ತಿದ್ದಂತೆ ಮುತ್ತಿಗೆ ಹಾಕಿದರು. ಈ ವೇಳೆ ಪೊಲೀಸರು ತಡೆಯಲು ಮುಂದಾದಾಗ ಪೊಲೀಸರ ವಿರುದ್ಧವೇ ಪೋಷಕರು ಹಾಗೂ ಕಾರ್ಯಕರ್ತರು ವಾಗ್ವಾದ ನಡೆಸಿದರು.
ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟೆರ್ ಪ್ರಭಾ ಮೇಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕ್ರಮಕೈಗೊಳ್ಳಬೇಕೆಂದು ವಿಎಚ್ ಪಿ ಪ್ರಾಂತ ಸಹಸಂಯೋಜಕ್ ಶರಣ್ ಪಂಪುವೆಲ್ ಆಗ್ರಹಿಸಿದ್ದಾರೆ. ಶಿಕ್ಷಕಿ ಮೇಲೆ ಕ್ರಮ ಕೈಗೊಳ್ಳಲು ವಿಶ್ವ ಹಿಂದೂಪರಿಷತ್ , ಬಜರಂಗದಳ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ತಮ್ಮ ಮಕ್ಕಳು ಕೂಡ ಒಂದು ತಿಂಗಳ ಹಿಂದೆಯೇ ಈ ಬಗ್ಗೆ ಹೇಳಿಕೊಂಡೊದ್ದರು ಎಂದು ಪೋಷಕರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸಿಸ್ಟರ್ ಪ್ರಭಾ ಅವರನ್ನು ನಮ್ಮ ಜೊತೆ ಮಾತನಾಡಿಸಿ ಅಂತಾ ಒತ್ತಾಯಿಸಿದರು. ಶ್ರೀರಾಮನ ವಿರುದ್ಧ ಈ ರೀತಿ ಹೇಳಿದಾಗ ಮಂದಿರ ಉದ್ಘಾಟನೆ ಆಗಿರಲಿಲ್ಲ. ಆಗ ನಾನು ಶ್ರೀರಾಮ ಪ್ರಾಣ ಪ್ರತಿಷ್ಠೆ ಆದ ಬಳಿಕ ಇದಕ್ಕೆ ತೀರ್ಮಾನ ಮಾಡು ಅಂತಾ ಬೇಡಿಕೊಂಡಿದ್ದೆವು. ಈಗ ಇದನ್ನು ಪ್ರಶ್ನಿಸುವ ಸಮಯ ಬಂದಿದೆ ಎಂದರು. ಈ ಸಂದರ್ಭದಲ್ಲಿ ವಾಗ್ವಾದ ನಡೆದಿದೆ. ಶಿಕ್ಷಕಿಯ ಬಗ್ಗೆ ವಿದ್ಯಾರ್ಥಿಯೋರ್ವರ ತಾಯಿ ಹೇಳಿರುವ ಮಾತುಗಳು ವೈರಲ್ ಆಗಿದ್ದು, ಈ ಬಗ್ಗೆ ಡಿಡಿಪಿಐಗೆ ದೂರು ನೀಡಲಾಗಿದೆ.
ಘಟನೆ ಸಂಬಂಧ ಮಾತನಾಡಿದ ಐವನ್ ಡಿಸೋಜಾ, ವಿದ್ಯಾರ್ಥಿಗಳ ಪೋಷಕರು ನನ್ನ ಬಳಿ ದೂರು ನೀಡಿದ್ದರು. ಆ ಬಗ್ಗೆ ವಿಚಾರಿಸಲು ಶಾಲೆಗೆ ಬಂದಿದ್ದೆ. ಸೋಮವಾರ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಮತ್ತು ಅಧ್ಯಾಪಕಿಯನ್ನು ಕರೆದು ಮಾತನಾಡುವುದಾಗಿ ಆಡಳಿತ ಮಂಡಳಿ ಹೇಳಿದೆ. ಸೋಮವಾರದವರೆಗೂ ಕಾಯೋಣ. ಕೊಲೆ ಮಾಡಿದವನು ಅಪರಾಧಿ ಅಂತ ತನಿಖೆ ಬಳಿಕ ಗೊತ್ತಾಗುತ್ತದೆ. ಅದೇ ರೀತಿ ಈ ಘಟನೆಯ ಸತ್ಯಾಸತ್ಯತೆ ತನಿಖೆ ಬಳಿಕ ಗೊತ್ತಾಗಲಿದೆ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post