ಮಂಗಳೂರು: ಶೌರ್ಯ ಮರೆತರೆ ಭಾರತ, ಹಿಂದುತ್ವ ನಾಶವಾಗಲಿದೆ ಎಂದು ಚಿಂತಕ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ವಿಶ್ವಹಿಂದೂ ಪರಿಷತ್ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಬಜರಂಗದಳ ನೇತೃತ್ವದಲ್ಲಿ ಸೆ.25ರಿಂದ ಚಿತ್ರದುರ್ಗದಿಂದ ಆರಂಭಗೊಂಡ ಶೌರ್ಯ ಜಾಗರಣ ರಥಯಾತ್ರೆ ಸೋಮವಾರ ಮಂಗಳೂರಿಗೆ ಆಗಮಿಸಿದ ಸಂದರ್ಭ ಮಂಗಳೂರಿನ ಕದ್ರಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂ ಮತ್ತು ಶೌರ್ಯ ಒಂದೇ ನಾಣ್ಯದ ಎರಡು ಮುಖಗಳು. ಶೌರ್ಯದ ಉದಾಹರಣೆಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಕೆಲವೊಮ್ಮೆ ಸೆಕ್ಯುಲರಿಸಂ, ತುಷ್ಟೀಕರಣಗಳ ಪ್ರಭಾವ ಆವರಿಸಿಕೊಂಡಾಗ ಶೌರ್ಯವನ್ನು ಮರೆತು ಹೊಡೆತ ತಿಂದಿದ್ದೇವೆ. ಅನಂತರ ಮತ್ತೆ ಶೌರ್ಯ ಅನಾವರಣಗೊಂಡಿದೆ. ಹಾಗಾಗಿ ಶೌರ್ಯವನ್ನು ಮರೆಯಬಾರದು ಎಂದು ಸೂಲಿಬೆಲೆ ಹೇಳಿದರು.
ವಿಶ್ವಹಿಂದೂ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಮಾತನಾಡಿ, ಔರಂಗಜೇಬ ಖಡ್ಗ ಹಿಡಿದ ಫ್ಲೆಕ್ಸ್ ಹಾಕಿ ಹಿಂದುಗಳನ್ನು ಹೆದರಿಸಲು ಮುಂದಾಗಿದ್ದಾರೆ. ಆ ಘಟನೆ ಶಿವಮೊಗ್ಗದಲ್ಲಿ ಆಗಿದ್ದರಿಂದ ಉಳಿದಿದ್ದೀರಿ. ಮಂಗಳೂರಿನಲ್ಲಿ ಆಗುತ್ತಿದ್ದರೆ ನಿಮ್ಮ ನೂರು ದಂಗೆಕೋರರ ಮನೆಗಳು ಹುಡಿಯಾಗುತ್ತಿದ್ದವು. ನಾವು ಯಾವತ್ತೂ ಪ್ರತೀಕಾರ ತೀರಿಸುವುದರಲ್ಲಿ ಹಿಂದೆ ಬೀಳಲ್ಲ. ಅದು ಬಜರಂಗದಳದ ತಾಕತ್ತು ಎಂದು ಹೇಳಿದರು.
ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮೆರವಣಿಗೆಗೆ ಚಾಲನೆ ನೀಡಿದರು. ವಿಎಚ್ ಪಿ ಪ್ರಾಂತ ಕಾರ್ಯಾಧ್ಯಕ್ಷ ಡಾ.ಎಂ. ಬಿ.ಪುರಾಣಿಕ್ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಡಾ| ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರೀಯ ಸತ್ಸಂಗ ಪ್ರಮುಖ್ ಮಹಾಬಲೇಶ್ವರ ಹೆಗಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸಂಘಚಾಲಕ ಸುನೀಲ್ ಆಚಾರ್, ವಿಎಎಚ್‌ಪಿ ಮಂಗಳೂರು ಅಧ್ಯಕ್ಷ ಎಚ್.ಕೆ. ಪುರುಷೋತ್ತಮ, ರಥಯಾತ್ರೆ ಸ್ವಾಗತ ಸಮಿತಿಯ ಕಾರ್ಯದರ್ಶಿ ಭುಜಂಗ ಕುಲಾಲ್ ಉಪಸ್ಥಿತರಿದ್ದರು.
ರಥಯಾತ್ರೆ ಸ್ವಾಗತ ಸಮಿತಿಯ ಅಧ್ಯಕ್ಷ ಗಿರಿಧರ ಶೆಟ್ಟಿ ಸ್ವಾಗತಿಸಿದರು. ಬಜರಂಗದಳ ಜಿಲ್ಲಾ ಸಂಚಾಲಕ ನವೀನ್ ಮೂಡುಶೆಡ್ಡೆ ಪ್ರಸ್ತಾವನೆಗೈದರು. ಆಶಿಕ್ ಕದ್ರಿ ನಿರ್ವಹಿಸಿದರು. ಚಿರಾಗ್ ಕದ್ರಿ ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವಕ್ಕಾಗಿ ಹುತಾತ್ಮರಾದವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post