ಪುತ್ತೂರು: ಹಿಂದುತ್ವ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ಮುಕ್ರಂಪಾಡಿಯಲ್ಲಿರುವ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಪುತ್ತಿಲ ಪರಿವಾರದ ಮುಕ್ರಂಪಾಡಿಯ ಕಚೇರಿಗೆ ಜಾಗರಣ ವೇದಿಕೆಯ ದಿನೇಶ್ ಪಂಜಿಗ ಎಂಬಾತ ತನ್ನ ಗುಂಪಿನೊಂದಿಗೆ ತಲವಾರನ್ನು ಬೆನ್ನಿಗೆ ಸಿಕ್ಕಿಸಿಕೊಂಡು ಬಂದು ಗಲಾಟೆ ನಡೆಸಿದ್ದಾನೆ. ತಲವಾರು ಹಿಡಿದು ಮನೀಶ್ ಕುಲಾಲ್ ಇಲ್ಲವೇ.. ಆತನನ್ನು ಬಿಡೋದಿಲ್ಲ ಎಂದು ಹೇಳಿ ದಾಂಧಲೆ ನಡೆಸಲು ಯತ್ನಿಸಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದು ದಿನೇಶ್ ಸೇರಿ ಐವರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದಾರೆ. ಕೃತ್ಯದ ಸಂದರ್ಭದಲ್ಲಿ ಮನೀಶ್ ಕುಲಾಲ್ ಸ್ಥಳದಲ್ಲಿ ಇರಲಿಲ್ಲ. ಇತರ ಪ್ರಮುಖರು ಸ್ಥಳದಲ್ಲಿದ್ದು ತಲವಾರು ಹಿಡಿದು ಬಂದಿದ್ದವರನ್ನು ಸಮಾಧಾನ ಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಪುತ್ತೂರು ಬನ್ನೂರು ಗ್ರಾಮದ ಮನೀಶ (23), ಪುತ್ತೂರು ಕಸಬಾ ಗ್ರಾಮದ ವಿನೀತ್ (19) ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ತಲವಾರನ್ನು ಬೆನ್ನಿಗೆ ಕಟ್ಟಿಕೊಂಡು ಬೆದರಿಕೆ ಹಾಕುವ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪುತ್ತಿಲ ಪರಿವಾರದ ಪ್ರಮುಖ ಮನೀಶ್ ಕುಲಾಲ್ ಗುರಿಯಾಗಿಸಿ ತಲವಾರು ದಾಳಿಗೆ ಮುಂದಾಗಿದ್ದರು ಎನ್ನಲಾಗುತ್ತಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ಠಾಣೆ ಎದುರಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ಮುಖಂಡರು ಜಮಾಯಿಸಿದ್ದಾರೆ. ಪರಿವಾರದ ಮುಖಂಡ ಅರುಣ್ ಪುತ್ತಿಲ ಪ್ರತಿಕ್ರಿಯಿಸಿ, ರೌಡಿಸಂ ರೀತಿಯಲ್ಲಿ ಇನ್ನೊಬ್ಬ ಕಾರ್ಯಕರ್ತನನ್ನು ಕೊಲ್ಲುವ ಜಾಯಮಾನ ಪುತ್ತೂರಿನಲ್ಲಿ ಬಂದಿದೆ. ಇದನ್ನು ಪುತ್ತೂರಿನ ಜನತೆ ಸಹಿಸುವುದಿಲ್ಲ. ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ದಿನೇಶ್ ಪಂಜಿಗ ಎಂಬಾತ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದು, ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗ ಮನೀಶ್ ಕುಲಾಲ್ ಬನ್ನೂರು ಎಂಬವರನ್ನು ಗುರಿಯಾಗಿಟ್ಟುಗೊಂಡು ಬಂದಿದ್ದರು ಎಂದು ಆರೋಪಿಸಲಾಗಿದೆ.
ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಇಬ್ಬರು ಬಾಲಕರ ಸಹಿತ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post