ಹೊಸದಿಲ್ಲಿ: ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಭಾರೀ ಚರ್ಚೆಗೆ ಕಾರಣವಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇದೀಗ ಕೊನೆಗೂ ನೇಮಕವಾಗಿದೆ. ಶಿಕಾರಿಪುರ ಶಾಸಕ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಮುಗಿದರೂ ಈ ಸ್ಥಾನಕ್ಕೆ ಹೊಸ ನೇಮಕಾತಿ ಆಗಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಬಳಿಕ ಹೊಸ ನೇಮಕಾತಿಯತ್ತ ಬಿಜೆಪಿ ವರಿಷ್ಠರು ಮನ ಮಾಡಿರಲಿಲ್ಲ. ಅಂತಿಮವಾಗಿ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ರಾಜ್ಯದಲ್ಲಿನ ಪ್ರಬಲ ವೀರಶೈವ ಲಿಂಗಾಯತ ಸಮುದಾಯದವರಿಗೆ ಬಿಜೆಪಿ ಪ್ರಾತಿನಿಧ್ಯ ನೀಡಿದೆ. ಅಲ್ಲದೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಪಕ್ಷ ಸಂಘಟನೆ, ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ದೃಷ್ಟಿಯಿಂದ ವಿಜಯೇಂದ್ರ ಅವರಿಗೆ ಸ್ಥಾನ ಕಲ್ಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪ್ರತಿಪಕ್ಷ ನಾಯಕ ಸ್ಥಾನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮಂದಿ ಆಕಾಂಕ್ಷಿಗಳಾಗಿದ್ದು, ಯಾರಿಗೆ ವಿಪಕ್ಷ ನಾಯಕನ ಸ್ಥಾನ ನೀಡಲಿದ್ದಾರೆಂಬ ಕುತೂಹಲ ಸೃಷ್ಟಿಸಿದೆ. ಪ್ರಬಲ ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದು, ಪ್ರತಿಪಕ್ಷ ನಾಯಕನ ಸ್ಥಾನವನ್ನು ದಲಿತ ಅಥವಾ ಒಕ್ಕಲಿಗ ಸಮುದಾಯದ ಮುಖಂಡರಿಗೆ ನೀಡುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post