ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲಿನಲ್ಲಿ ಮುಸ್ಲಿಂ ಧರ್ಮದ ವ್ಯಕ್ತಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಾಲಯ ಇರುವ ಬಗ್ಗೆ ವ್ಯಕ್ತಿಯೊಬ್ಬರಿಗೆ ಕನಸು ಬಿದ್ದಿದೆ. ಅದರಂತೆ ಜೆಸಿಬಿ ಮೂಲಕ ಜಮೀನು ಅಗೆದಾಗ ನಶಿಸಿ ಹೋಗಿದ್ದ 12ನೇ ಶತಮಾನದ್ದೆನ್ನಲಾದ ಶ್ರೀ ಗೋಪಾಲಕೃಷ್ಣ ದೇವರ ಭಗ್ನ ವಿಗ್ರಹ ಹಾಗೂ ಇನ್ನಿತರ ಪರಿಕರಗಳು ಪತ್ತೆಯಾಗಿದೆ. ಹೀಗಾಗಿ ಮುಸ್ಲಿಂ ವ್ಯಕ್ತಿ ತನ್ನ ವಶದಲ್ಲಿದ್ದ ಜಮೀನನ್ನು ದೇವಸ್ಥಾನಕ್ಕೆ ಬಿಟ್ಟುಕೊಟ್ಟಿದ್ದಾರೆ.
ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ತೆಕ್ಕಾರಿನಲ್ಲಿ ಜಮೀನು ಖರೀದಿಸಿದ್ದರು. ಇವರಿಗೆ ಬಿದ್ದ ಕನಸಿನಲ್ಲಿ ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ ವ್ಯಕ್ತಿ ಹಾಮದ್ ಬಾವ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಸ್ಥಾನ ಇರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಲಕ್ಷ್ಮಣ್ ಅವರು ಗ್ರಾಮದ ಜನರಿಗೆ ಮಾಹಿತಿ ನೀಡಿದ್ದರು. ಅದರಂತೆ ಜ್ಯೋತಿಷಿಗಳ ಮೂಲಕ ಚಿಂತನೆ ನಡೆಸಿದಾಗ ಭೂಗರ್ಭದಲ್ಲಿ ದೇವರಿರುವ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ ಜೆಸಿಬಿ ಮೂಲಕ ಭೂಮಿಯ ಅಗೆತ ನಡೆಸಿದ್ದರು. ಹತ್ತಾರು ಅಡಿ ಅಗೆಯುತ್ತಿದ್ದಂತೆ ಭಗ್ನಗೊಂಡ ಗೋಪಾಲ ಕೃಷ್ಣ ದೇವರ ವಿಗ್ರಹ ಪತ್ತೆಯಾಗಿದೆ. ಅದರಂತೆ, ವಿಗ್ರಹ ಪತ್ತೆಯಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಗ್ರಾಮಸ್ಥರು ತೀರ್ಮಾನಿಸಿದ್ದು, ಹಾಮದ್ ಅವರು ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಬಿಟ್ಟುಕೊಟ್ಟಿದ್ದಾರೆ. ಹಾಮದ್ ಅವರಿಗೆ ಪೂರ್ವಜರಿಂದ ಕೃಷಿ ಭೂಮಿ ಬಂದಿತ್ತು. ಸರ್ವೆ ನಡೆಸಿದಾಗ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ.
ನೂರಾರು ವರ್ಷಗಳ ಹಿಂದೆ ದಂಡಯಾತ್ರೆ ವೇಳೆ ಟಿಪ್ಪು ಸುಲ್ತಾನ್ ದಾಳಿಗೆ ಗೋಪಾಲಕೃಷ್ಣ ದೇವಸ್ಥಾನ ತುತ್ತಾಗಿದೆ ಎನ್ನಲಾಗಿದೆ. ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರುವ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿದೆ. ಅಲ್ಲದೇ ಕೆಲ ಹಿರಿಯರ ಮಾಹಿತಿಯಂತೆ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನವಿದ್ದ ಮಾಹಿತಿ ಹಿನ್ನೆಲೆ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಮಾಡಿಕೊಂಡು ದೇವಸ್ಥಾನ ಶೋಧ ಆರಂಭಿಸಲಾಗಿತ್ತು. ಆದರೆ ನಿಖರ ಜಾಗದ ಮಾಹಿತಿ ಇಲ್ಲದ ಕಾರಣ ಗ್ರಾಮಸ್ಥರು ಸುಮ್ಮನಾಗಿದ್ದರು.
ಆದರೆ 10 ವರ್ಷಗಳ ಹಿಂದೆ ಬೆಂಗಳೂರು ಮೂಲದ ಲಕ್ಷ್ಮಣ ಎಂಬವರಿಂದ ತೆಕ್ಕಾರು ಬಳಿ ಜಾಗ ಖರೀದಿ ಮಾಡಲಾಗಿತ್ತು. ಈ ವೇಳೆ ಪ್ರಶ್ನಾ ಚಿಂತನೆ ವೇಳೆ ಲಕ್ಷ್ಮಣರ ಜಾಗದ ಸಮೀಪವೇ ದೇವಸ್ಥಾನ ಇರುವ ಸುಳಿವು ಸಿಕ್ಕಿದೆ. ಆದರೆ ಲಕ್ಷ್ಮಣರ ಜಾಗದ ಸನಿಹ ಹಾಮದ್ ಬಾವಾ ಎಂಬವರ ಜಾಗವಿತ್ತು. ಈ ಮಧ್ಯೆ ಲಕ್ಷ್ಮಣ್ ಅವರ ಕನಸಿನಲ್ಲಿ ವಿಷ್ಣು ದೇವರು ಬಂದು ಇರುವಿಕೆ ತೋರಿದ್ದರು. ಬಾವಿಯ ಆಳದಲ್ಲಿ ವಿಷ್ಣುವಿನ ವಿಗ್ರಹದ ಮಾದರಿಯಲ್ಲಿ ಲಕ್ಷ್ಮಣರಿಗೆ ಕನಸು ಬಿದ್ದಿದೆ. ಅದರಂತೆ ಮತ್ತೆ ಪ್ರಶ್ನಾ ಚಿಂತನೆ ಹಾಕಿದಾಗ ಮುಸ್ಲಿಂ ವ್ಯಕ್ತಿಯ ಜಾಗದಲ್ಲಿ ದೇವಸ್ಥಾನ ಇರುವ ಮಾಹಿತಿ ತಿಳಿದುಬಂದಿದೆ.
ಅದರಂತೆ ಜಾಗದ ದಾಖಲೆ ಪರಿಶೀಲಿಸಿದಾಗ ಅದು ಸರ್ಕಾರಿ ಜಾಗ ಎಂಬುದು ಪತ್ತೆಯಾಗಿದೆ. ಹೀಗಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಹಕಾರದಲ್ಲಿ ಮುಸ್ಲಿಂ ವ್ಯಕ್ತಿಯ ಜಾಗದ ಸರ್ವೇ ನಡೆಸಲಾಗಿದೆ. ಸರ್ವೇ ವೇಳೆ 25 ಸೆಂಟ್ಸ್ ಜಾಗ ಸರ್ಕಾರಿ ಎಂಬುದು ಪತ್ತೆಯಾದ ಹಿನ್ನೆಲೆ ಹಾಮದ್ ಬಾವಾ ಅಡಿಕೆ ಗಿಡ ನೆಟ್ಟಿದ್ದ ಜಾಗ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಬಳಿಕ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ನಿಂದ ಜಾಗ ದೇವಸ್ಥಾನ ನಿರ್ಮಾಣಕ್ಕೆ ನೀಡಲು ಡಿಸಿಗೆ ಮನವಿ ಮಾಡಲಾಗಿದೆ. ಅದರಂತೆ ಜಿಲ್ಲಾಧಿಕಾರಿ ಧಾರ್ಮಿಕ ದತ್ತಿ ಇಲಾಖೆಗೆ ದೇವಸ್ಥಾನ ನಿರ್ಮಿಸಲು ಜಾಗ ಕಾಯ್ದಿರಿಸಿದ್ದಾರೆ.
ಹೀಗಾಗಿ ನಿನ್ನೆ ಜೆಸಿಬಿಯಲ್ಲಿ ಉತ್ಖನನದ ವೇಳೆ ಹತ್ತಾರು ಅಡಿ ಆಳದ ಬಾವಿಯಲ್ಲಿ ಕನಸಿನಲ್ಲಿ ಬಂದಂತೆ ಮೂಲ ದೇವರ ವಿಗ್ರಹ ಪತ್ತೆಯಾಗಿದೆ. ಸದ್ಯ ಸುತ್ತಲಿನ ತನ್ನ 75 ಸೆಂಟ್ಸ್ ಜಾಗವನ್ನೂ ಸೌಹಾರ್ದಯುತವಾಗಿ ದೇವಸ್ಥಾನ ಟ್ರಸ್ಟ್ಗೆ ಹಾಮದ್ ಬಾವಾ ಮಾರಾಟ ಮಾಡಿದ್ದಾರೆ.
ಲಭ್ಯ ಮೂರ್ತಿ ಸಹಿತ ಪರಿಕರಗಳನ್ನು ಶ್ರದ್ಧಾ ಭಕ್ತಿಯಿಂದ ಸಂರಕ್ಷಿಸಲಾಗಿದ್ದು, ಮುಂದಿನ ಕಾಮಗಾರಿಯ ವೇಳೆ ಇನ್ನಷ್ಟು ಅಂಶಗಳು ಬೆಳಕಿಗೆ ಬರುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯರಾದ ಲಕ್ಷ್ಮಣ ಚೆನ್ನಪ್ಪ, ನಾಗ ಭೂಷಣ ಬಾಗ್ಲೋಡಿ, ತಿಮ್ಮಪ್ಪ ಪೂಜಾರಿ, ತುಕಾರಾಮ ನಾಯಕ್, ಅನಂತ ಪ್ರಸಾದ್ ನೈತಡ್ಕ, ಸುರೇಶ್ ಸತೀಶ್, ಮಂಜುನಾಥ ಸಾಲಿಯಾನ್, ಪ್ರವೀಣ್ ರೈ, ಸದಾನಂದ ನಾಯಕ್, ಪ್ರಕಾಶ್ ನಾಯಕ್, ಅಣ್ಣಿ ಪೂಜಾರಿ, ಗಿರಿಧರ ನಾಯಕ್, ಗೋಪಾಲ ನಾಯಕ್, ರವೀಂದ್ರ ಗೌಡ, ನವೀನ್ ರೈ, ತಿಲಕ್ ರಾಜ್, ಪದ್ಮನಾಭ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post