ಕುಂದಾಪುರ, ನ.11: ಮೀನುಗಾರಿಕೆ ಬೋಟ್ನಿಂದ ಆಯತಪ್ಪಿ ಅರಬ್ಬಿ ಸಮುದ್ರಕ್ಕೆ ಬಿದ್ದು ಸುದೀರ್ಘ 43 ಗಂಟೆಗಳ ಕಾಲ ಈಜುತ್ತಲೇ ಬದುಕುಳಿದಿದ್ದ ಮೀನುಗಾರನನ್ನು ಗಂಗೊಳ್ಳಿ ಮೂಲದ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನ 8 ಜನರ ತಂಡ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದರು. ತಂಡದಲ್ಲಿದ್ದ ಮುರುಗನ್ (25) ಎಂಬ ಮೀನುಗಾರ ಬುಧವಾರ ರಾತ್ರಿ ಮೂತ್ರ ವಿಸರ್ಜನೆಗೆ ಬೋಟ್ನ ಅಂಚಿಗೆ ಹೋಗಿದ್ದ ವೇಳೆ ಸಮುದ್ರಕ್ಕೆ ಬಿದ್ದಿದ್ದ. ಮುರುಗನ್ ಸಮುದ್ರದಲ್ಲಿ ಬಿದ್ದಿರುವುದು ಇತರೇ ಮೀನುಗಾರರಿಗೆ ತಿಳಿದಿರಲಿಲ್ಲ. ಬಳಿಕ ವಿಷಯ ತಿಳಿದು ಹುಡುಕಾಟ ನಡೆಸಿದರೂ ಪತ್ತೆ ಆಗಿರಲಿಲ್ಲ. ಕೊನೆಗೆ ತಮಿಳುನಾಡು ಮೀನುಗಾರರು ಮುರುಗನ್ ನೀರುಪಾಲಾಗಿ ಮೃತಪಟ್ಟಿದ್ದಾನೆ ಎಂದುಕೊಂಡಿದ್ದರು.
ನ.10ರಂದು ಶುಕ್ರವಾರ ಸಂಜೆ ಗಂಗೊಳ್ಳಿಯ ಸಾಗರ್ ಬೋಟಿನ ಮೀನುಗಾರರು ಆಳ ಸಮುದ್ರಕ್ಕೆ ತೆರಳಿದ್ದಾಗ, ಸಮುದ್ರದಲ್ಲಿ ಯಾರೋ ಈಜುವಂತೆ ಕಂಡುಬಂದಿದೆ. ಕೈಯನ್ನು ಎತ್ತಿ ರಕ್ಷಣೆಗೆ ಕೂಗಿಕೊಂಡಿದ್ದ ಯುವಕನನ್ನು ಕೂಡಲೇ ಎತ್ತಿ ಬೋಟಿಗೆ ಹಾಕಿದ್ದಾರೆ. ಬರೋಬ್ಬರಿ ಎರಡು ದಿನಗಳ ಕಾಲ ಸಮುದ್ರದಲ್ಲಿ ಈಜಾಡುತ್ತಲೇ ಬದುಕುಳಿದ ಮೀನುಗಾರನ ಬಗ್ಗೆ ತಮಿಳುನಾಡು ಮೀನುಗಾರರಿಗೆ ತಿಳಿಸಿದ್ದು ಅಚ್ಚರಿಗೆ ಒಳಗಾಗಿದ್ದಾರೆ.
ಸರಿ ಸುಮಾರು ಎರಡು ದಿನಗಳ ಕಾಲ ನಿರಂತರವಾಗಿ ಈಜಿ ಬಸವಳಿದಿದ್ದ ಮೀನುಗಾರನ ರಕ್ಷಣೆ ಮಾಡಿರೋದು ಇದೀಗ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬಂದಿದೆ. ಸಂಪೂರ್ಣ ನಿತ್ರಾಣಗೊಂಡಿದ್ದ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿದ್ದ ಗಂಗೊಳ್ಳಿ ಮೀನುಗಾರರು, ತಮಿಳುನಾಡಿಗೆ ಬೋಟ್ ನವರಿಗೆ ನಡು ನೀರಿನಲ್ಲೇ ಹಸ್ತಾಂತರ ಮಾಡಿದ್ದಾರೆ.
ಗಂಗೊಳ್ಳಿ ಬೋಟ್ನ ಮೀನುಗಾರರಿಗೆ ಧನ್ಯವಾದ: ಸಮುದ್ರಕ್ಕೆ ಬಿದ್ದ ಮೀನುಗಾರನ ಶವ ಹುಡುಕುತ್ತಿದ್ದ ತಮಿಳುನಾಡು ಮೀನುಗಾರರಿಗೆ ಈತ ಬದುಕಿ ಬಂದಿರೋದು ಕಂಡು ಎಲ್ಲಿಲ್ಲದ ಖುಷಿಯಾಗಿದೆ. ಗಂಗೊಳ್ಳಿ ಬೋಟ್ನ ಮೀನುಗಾರರಿಗೆ ಧನ್ಯವಾದ ತಿಳಿಸಿ ತಮಿಳ್ನಾಡಿಗೆ ವಾಪಾಸ್ಸಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post