ಉಡುಪಿ: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನ ತೃಪ್ತಿ ಲೇಔಟ್‌ನಲ್ಲಿ ಭಾನುವಾರ ನಡೆದಿದೆ.
ಕೊಲೆಯಾದ ಹಸೀನಾ ಅವರ ಅತ್ತೆ ಹಾಜಿರಾ(70) ದುಷ್ಕರ್ಮಿಯಿಂದ ಪಾರಾದ ವೃದ್ಧೆ. ಇಂದು ಬೆಳಗ್ಗೆ 8:30ರ ಸುಮಾರಿಗೆ ಹಸೀನಾ ಅವರ ಮನೆಗೆ ಬಂದ ಹಂತಕ ಹಸೀನಾ(42) ಹಾಗೂ ಅವರ ಇಬ್ಬರು ಹೆಣ್ಮಕ್ಕಳಾದ ಅಫ್ನಾನ್(22) ಮತ್ತು ಅಯ್ನಾಝ್(20) ಎಂಬವರನ್ನು ಹರಿತವಾದ ಆಯುಧದಿಂದ ಇರಿದು ಕೊಲೆಗೈದಿದ್ದಾನೆ. ಬೊಬ್ಬೆ ಕೇಳಿ ಹೊರಗೆ ಅಂಗಳದಲ್ಲಿ ಸೈಕಲ್ ತುಳಿಯುತ್ತಿದ್ದ ಹಾಜಿರಾ ಅವರ ಕಿರಿಯ ಪುತ್ರ ಅಸೀಮ್(12) ಮನೆಯೊಳಗೆ ಓಡಿ ಬಂದಿದ್ದಾನೆ. ಈ ವೇಳೆ ಬಾಲಕನನ್ನೂ ಹಂತಕ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವೇಳೆ ಮನೆಯಲ್ಲಿದ್ದ ಹಾಜಿರಾ ಅವರ ಹೊಟ್ಟೆ ಭಾಗಕ್ಕೆ ದುಷ್ಕರ್ಮಿ ಚೂರಿಯಿಂದ ಇರಿದಿದ್ದಾನೆ. ಗಾಯಗೊಂಡ ಅವರು ದುಷ್ಕರ್ಮಿಯ ಕೈಯಿಂದ ತಪ್ಪಿಸಿಕೊಂಡು ಮನೆಯ ಶೌಚಾಲಯದೊಳಗೆ ತೆರಳಿ ಬಾಗಿಲು ಮುಚ್ಚಿ ಚಿಲಕ ಹಾಕಿಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯೊಳಗೆ ತನಿಖೆ ನಡೆಸುತ್ತಿದ್ದ ವೇಳೆ ಒಳಗಡೆಯಿಂದ ಬಾಗಿಲು ಮುಚ್ಚಿರುವ ಶೌಚಾಲಯವನ್ನು ಗಮನಿಸಿದ್ದಾರೆ. ಈ ವೇಳೆ ಬಾಗಿಲು ತೆರೆಯುವಂತೆ ಪೊಲೀಸರು ಮನವಿ ಮಾಡಿದಾಗ ಹೆದರಿದ್ದ ಹಾಜಿರಾ ಬಾಗಿಲು ತೆರೆಯಲು ಧೈರ್ಯ ತೋರಲಿಲ್ಲ. ಕೊನೆಗೆ ಬಾಗಿಲು ಮುರಿದು ಹಾಜಿರಾರನ್ನು ರಕ್ಷಿಸಿದ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಿಕ್ಷಾದಲ್ಲಿ ಬಂದಿದ್ದ ಆರೋಪಿ : ಸಂತೆಕಟ್ಟೆಯಿಂದ ತೃಪ್ತಿ ನಗರಕ್ಕೆ ಆರೋಪಿ ರಿಕ್ಷಾದಲ್ಲಿ ಬಂದಿರುವುದು ಸ್ಪಷ್ಟವಾಗಿದೆ. ಸಂತೆಕಟ್ಟೆ ಸ್ಟಾಂಡ್ ನ ರಿಕ್ಷಾ ಚಾಲಕ ಶ್ಯಾಮ್ ಹೇಳಿಕೆ ನೀಡಿದ್ದು, ಆರೋಪಿ ಮನೆಯ ವಿಳಾಸವನ್ನು ಸರಿಯಾಗಿಯೇ ತಿಳಿಸಿದ್ದ. ದಾರಿ ತಪ್ಪಿದಾಗ ಆರೋಪಿಯೇ ಮನೆಯ ಗುರುತು ಹೇಳಿದ್ದ. ದೃಢಕಾಯದ ವ್ಯಕ್ತಿ, 45ರ ಆಸುಪಾಸಿನ ವಯಸಿನವನಾಗಿದ್ದಾನೆ. ಬ್ರೌನ್ ಕಲರ್ ಅಂಗಿ ಧರಿಸಿದ್ದು, ಬಿಳಿ ಬಣ್ಣದ ಮಾಸ್ಕ್ ಹಾಕಿಕೊಂಡಿದ್ದ. ಮನೆಯಲ್ಲಿ ಬಿಟ್ಟು ಹೋಗಿ 15 ನಿಮಿಷಕ್ಕೆ ಮತ್ತೆ ಸಂತೆಕಟ್ಟೆ ಸ್ಟ್ಯಾಂಡ್ ಗೆ ಬಂದಿದ್ದ. ಗಡಿಬಿಡಿ ಅಲ್ಲಿ ತನ್ನನ್ನು ಕರೆದುಕೊಂಡು ಹೋಗುವಂತೆ ರಿಕ್ಷಾ ಚಾಲಕರಿಗೆ ಕೇಳಿಕೊಂಡಿದ್ದ. ಘಟನಾ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ಆಟೋ ಸ್ಟಾಂಡ್ ತಲುಪಿದ್ದ ಎನ್ನುವುದು ಸ್ಪಷ್ಟವಾಗಿದೆ.
ಆರೋಪಿ ಬೆಂಗಳೂರು ಭಾಗದ ಶೈಲಿಯ ಕನ್ನಡ ಮಾತನಾಡುತ್ತಿದ್ದು, ಮೇಲ್ನೋಟಕ್ಕೆ ಪರಿಚಯದವನೇ ಆಗಿದ್ದು ಆತನಿಂದಲೇ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಮನೆಯಲ್ಲಿ ಯಾವ ವಸ್ತುಗಳು ಕಳವು ನಡೆದಿಲ್ಲ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿದ್ದು, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳ ಸಹಿತ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post