ಮಂಗಳೂರು, ಡಿ.10 : ನಗರ ಹೊರ ವಲಯದ ನೀರುಮಾರ್ಗ ಸಮೀಪ ಯುವಕನಿಗೆ ಚೂರಿ ಇರಿತ ನಡೆಸಿರುವ ಘಟನೆ ಡಿಸೆಂಬರ್ 10ರ ಶುಕ್ರವಾರ ರಾತ್ರಿ ನಡೆದಿದೆ.
ಅಡ್ಯಾರು ಪದವು ನಿವಾಸಿ ಅಬ್ದುಲ್ ರಜಾಕ್ ಯಾನೆ ರಿಯಾಜ್ ಹಲ್ಲೆಗೊಳಗಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದು ಯುವತಿ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ನೀರುಮಾರ್ಗ ಸಮೀಪ ಪಡು ಪೋಸ್ಟ್ ಆಫೀಸ್ ಬಳಿಯ ಬಿತ್ತ್‌ಪಾದೆ ಎಂಬಲ್ಲಿ ಶುಕ್ರವಾರ ರಾತ್ರಿ ಸುಮಾರು 7:30ಕ್ಕೆ ಅಡ್ಯಾರ್ ಪದವಿನ ರಿಯಾಝ್ ಅಹ್ಮದ್ (38) ಎಂಬವರಿಗೆ , ಜೀವನ್, ಕಿಶೋರ್, ಸುಜಿತ್, ಗಣೇಶ್ ಮತ್ತಿತರರು ಮಾರಕಾಯುಧದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯುವಕ, ಯುವತಿಯನ್ನು ಕಾರಿನಲ್ಲಿ ಮಲ್ಲೂರು ಕಡೆಗೆ ಕರೆದೊಯ್ಯುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮೊದಲೇ ಮಾಹಿತಿ ಇದ್ದ ಯುವಕರ ತಂಡ, ಪಡು ಅಂಚೆ ಕಚೇರಿ ಬಳಿ ಕಾರನ್ನು ತಡೆದು ಯುವತಿ ಮತ್ತು ಯುವಕನನ್ನು ಪ್ರಶ್ನೆ ಮಾಡಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದಿದ್ದು ಅಬ್ದುಲ್ ರಜಾಕ್ ಮೇಲೆ ಐದಾರು ಮಂದಿಯ ತಂಡ ಹಲ್ಲೆ ನಡೆಸಿದೆ. ಯುವಕನ ತಲೆಗೆ ಬೀಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದು ತಲೆಗೆ ಏಟು ಬಿದ್ದು ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಆತನನ್ನು ಅಂಬುಲೆನ್ಸ್‌ನಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಯುವತಿ ಮೇಲೂ ಏಟು ಬಿದ್ದಿದ್ದು ಆಕೆ ಓಡಿ ತಪ್ಪಿಸಿಕೊಂಡಿದ್ದಾಳೆ.
ಇನ್ನು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಹಲ್ಲೆಯಾದ ಯುವಕ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.