ಕುಡುಪು: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ದೇಗುಲದಲ್ಲಿ ಮುಂಜಾನೆಯಿಂದಲೇ ವಿವಿಧ ಪೂಜೆ ಪುನಸ್ಕಾರಗಳು ಜರಗಿದವು. ಷಷ್ಠಿ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು, ದೇವರ ದರ್ಶನ ಪಡೆದರು. ದೇವರಿಗೆ ತಂಬಿಲ, ಪಂಚಾಮೃತ, ಕೇದಗೆ, ಹಿಂಗಾರ, ಬೆಳ್ಳಿ, ಚಿನ್ನದ ಹರಕೆಗಳನ್ನು ಒಪ್ಪಿಸಿದರು.
ಮುಂಜಾನೆ 4 ಗಂಟೆಗೆ ದೇವರಿಗೆ ಪಂಚಮಿ ಉತ್ಸವ ನಡೆಯಿತು. ನೂರಾರು ಭಕ್ತರು ಉರುಳು ಸೇವೆಗೈದರು. ಶ್ರೀ ದೇವರಿಗೆ ಉಷಾಕಾಲ ಪೂಜೆ ನೆರವೇರಿತು. ಬಳಿಕ ವಿಶೇಷ ಪಂಚಾಮೃತ ಅಭಿಷೇಕ, ನವಕಲಶಾಭಿಷೇಕ, ಸಹಸ್ರನಾಮ, ಅಷ್ಟೋತ್ತರ ಅರ್ಚನೆ, ವಿಶೇಷ ಹರಿವಾಣ ನೈವೇದ್ಯದೊಂದಿಗೆ ಸರ್ವಾಭರಣಭೂಷಿತ ಶ್ರೀ ಅನಂತಪದ್ಮನಾಭ ದೇವರಿಗೆ ಷಷ್ಠಿಯ ವೈಭವ ಮಹಾಪೂಜೆ ಜರಗಿತು.
ಮಧ್ಯಾಹ್ನ 12.30ಕ್ಕೆ ಶ್ರೀ ದೇವರ ಬಲಿ ಹೊರಟು ರಾಜಾಂಗಣದಲ್ಲಿ ವಿಶೇಷ ವಾದ್ಯ ಸುತ್ತು ಜರಗಿ ಶ್ರೀ ದೇವರು ಬ್ರಹ್ಮರಥ ಇರುವ ರಾಜಬೀದಿಗೆ ಬಂದು 1 ಗಂಟೆಗೆ ಬ್ರಹ್ಮರಥೋತ್ಸವ ನೆರವೇರಿತು. ಈ ಸಂದರ್ಭ ಭಕ್ತರ “ಗೋವಿಂದಾ ಗೋವಿಂದಾ’ ನಾಮಸ್ಮರಣೆ, ಉದ್ಘೋಷ ಮುಗಿಲು ಮುಟ್ಟಿತ್ತು.
ಷಷ್ಠಿ ಮಹೋತ್ಸವ ಸಂದರ್ಭ 6 ಸಾವಿರ ಪಂಚಾಮೃತ ಅಭಿಷೇಕ, 20 ಸಾವಿರಕ್ಕೂ ಮಿಕ್ಕಿ ನಾಗತಂಬಿಲ ಸೇವೆಗಳು ನಡೆಯಿತು. ಮಹೋತ್ಸವದ ಅಂಗವಾಗಿ ಶ್ರೀ ದುರ್ಗಾ ಮಕ್ಕಳ ಮೇಳದಿಂದ ಯಕ್ಷಗಾನ ಬಯಲಾಟ ನೆರವೇರಿತು. ಷಷ್ಠಿಮಹೋತ್ಸವ ದಿನ ಮಧ್ಯಾಹ್ನ 11 ಗಂಟೆಗೆ ಪಲ್ಲಪೂಜೆ ಜರಗಿ, ಬಳಿಕ ಅನ್ನಪ್ರಸಾದ ವಿತರಣೆ ಆರಂಭಗೊಂಡಿತು. ಅಪರಾಹ್ನ 3 ಗಂಟೆಯವರೆಗೆ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post