ಮಂಗಳೂರು, ಮಾ.11: ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಮಹಿಳೆಯರು ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ನ್ಯಾಯಾಧೀಶರ ಹುದ್ದೆಗೆ ನೇಮಕಗೊಂಡಿದ್ದಾರೆ. ಮೂಡುಬಿದಿರೆ ವಕೀಲರ ಸಂಘದ ಸದಸ್ಯೆ ಸುನೀತಾ ಭಂಡಾರಿ, ಮಂಗಳೂರು ವಕೀಲರ ಸಂಘದ ಜೋಯ್ಲಿನ್ ಮೆಂಡೋನ್ಸ, ಬೆಳ್ತಂಗಡಿ ವಕೀಲರ ಸಂಘದ ಶ್ರುತಿ ಕೆ.ಎಸ್. ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾದವರು.
ರಾಜ್ಯದಲ್ಲಿ ಒಟ್ಟು 94 ನ್ಯಾಯಾಧೀಶರ ಹುದ್ದೆಗಳಿಗೆ 239 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 75 ಮಂದಿ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ವಕೀಲರ ಸಂಘದ ಸದಸ್ಯೆಯಾಗಿರುವ ಶ್ರುತಿ ಕೆ.ಎಸ್. ಉಜಿರೆ ಟಿಬಿ ಕ್ರಾಸ್ ನಿವಾಸಿಯಾಗಿದ್ದು, ಐದು ವರ್ಷಗಳಿಂದ ವಕೀಲರಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಮೂರನೇ ಬಾರಿಯ ಪ್ರಯತ್ನದಲ್ಲಿ ಜಡ್ಜ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಬೆಳ್ತಂಗಡಿಯಲ್ಲಿ ಧನಂಜಯ ರಾವ್ ಅವರ ಜೂನಿಯರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಶ್ರುತಿ ಕೆ.ಎಸ್. ಅವರ ಪತಿ ರಂಜಿತ್ ನಾಯ್ಕ್ ಮಂಗಳೂರಿನಲ್ಲಿ ವಕೀಲರಾಗಿದ್ದಾರೆ.
ಮಂಗಳೂರು ತಾಲೂಕಿನ ಮೂಡುಪೆರಾರ ನಿವಾಸಿ ಜೋಯ್ಲಿನ್ ಮೆಂಡೋನ್ಸ 2012ರಲ್ಲಿ ಕಾನೂನು ವ್ಯಾಸಂಗ ಪೂರೈಸಿ, ಆಬಳಿಕ ಮಂಗಳೂರಿನಲ್ಲಿ ಹಿರಿಯ ವಕೀಲ ಅನಂತಕೃಷ್ಣ ಅವರಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು.
ಜಡ್ಜ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಜೋಯ್ಲಿನ್ ಅವರ ಪತಿ ಆಲ್ವಿನ್ ಸಲ್ದಾನಾ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. ಇವರಿಗೆ ಮೂರೂವರೆ ವರ್ಷದ ಮಗು ಇದೆ. ತಾಯಿ ಮತ್ತು ಅಣ್ಣನೇ ನನಗೆ ಪ್ರೇರಣೆ ಎಂದಿದ್ದಾರೆ ಜೋಯ್ಲಿನ್.