ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಐಟಿಕೆ ಬೀಚ್ನಲ್ಲಿ ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರಪಾಲಾಗಿ ಮೃತಪಟ್ಟಿದ್ದಾರೆ.
ಮಂಗಳೂರು ಶಕ್ತಿನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಮೃತರು. ವೈಷ್ಣವಿ ಅವರ ತಂದೆ ವೆಂಕಟೇಶ್ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು.
ವೆಂಕಟೇಶ್ ಅವರ ಮಾವ ಈಚೆಗೆ ನಿಧನರಾಗಿದ್ದು, ತಿಥಿಯ ಪಿಂಡ ಪ್ರದಾನ ಮಾಡಲೆಂದು ಕುಟುಂಬಿಕರು ಎನ್ಐಟಿಕೆ ಸಮುದ್ರ ಕಿನಾರೆಗೆ ಬಂದಿದ್ದರು. ಪಿಂಡ ಪ್ರದಾನ ಮಾಡಿದ ಬಳಿಕ ವೆಂಕಟೇಶ್, ಅವರ ಪುತ್ರಿ ವೈಷ್ಣವಿ ಹಾಗೂ ತಮ್ಮನ ಪುತ್ರಿ ತ್ರಿಶಾ ಸಮುದ್ರಕ್ಕೆ ಇಳಿದಿದ್ದಾರೆ. ಈ ಸಂದರ್ಭ ಬಂದ ಬೃಹತ್ ಅಲೆಗೆ ಸಿಲುಕಿ ಮೂವರು ಸಮುದ್ರಪಾಲಾದರು.
ಸಮೀಪದಲ್ಲಿದ್ದ ಹೋಮ್ ಗಾರ್ಡ್ ಪ್ರಶಾಂತ್ ಮತ್ತು ಸ್ಥಳೀಯ ಯುವಕರು ಧಾವಿಸಿ, ಸಮುದ್ರಪಾಲಾದವರನ್ನು ದಡಕ್ಕೆ ಕರೆ ತಂದಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ವೈಷ್ಣವಿ ಮತ್ತು ತ್ರಿಶಾ ಕೊನೆಯುಸಿರೆಳೆದಿದ್ದಾರೆ. ವೆಂಕಟೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೈಷ್ಣವಿಯು ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ತ್ರಿಶಾ ಬೆಂಗಳೂರಿನ ಗುರುಕುಲ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post