ಮಂಗಳೂರು ಪಾತಕ ಲೋಕದ ಗ್ಯಾಂಗ್ ವಾರ್ ಅಧ್ಯಾಯಕ್ಕೆ ಸೇರ್ಪಡೆಯಾದ ರೌಡಿ ಶೀಟರ್ ರಾಹುಲ್ ಕಕ್ಕೆ ರಾಹುಲ್ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.. ರಾಹುಲ್ ಭಯದಿಂದ ಮಂಗಳೂರು ಬಿಟ್ಟು ವಿದೇಶಕ್ಕೆ ಹೋಗಿದ್ದ ವ್ಯಕ್ತಿ ಮತ್ತೆ ಮಂಗಳೂರಿಗೆ ಬಂದು ಜೀವನ ನಡೆಸಲು ಮುಂದಾಗಿದ್ದು,ಇಲ್ಲಿ ಬದುಕಬೇಕಾದರೆ ರಾಹುಲ್ ಇದ್ದರೆ ಸಾಧ್ಯ ಇಲ್ಲ ಅಂತಾ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿದ ಮಾಹಿತಿ ಬಯಲಾಗಿದೆ.. ಮಂಗಳೂರಿನ ಎಮ್ಮೆಕೆರೆಯ ಮೈದಾನದಲ್ಲಿ ಏಪ್ರಿಲ್ 28 ರಂದು ರೌಡಿಶೀಟರ್ ರಾಹುಲ್ ತಿಂಗಳಾಯ ಅಲಿಯಾಸ್ ಕಕ್ಕೆ ರಾಹುಲ್ ಎಂಬಾತನ ಕೊಲೆಯಾಗಿತ್ತು.
ಮಾರಿ ಹಬ್ಬ ಹಿನ್ನೆಲೆಯಲ್ಲೇ ನಡೆಯುತ್ತಿದ್ದ ಕೋಳಿ ಅಂಕ ನೋಡಲು ಸ್ನೇಹಿತನೊಂದಿಗೆ ಹೋಗಿದ್ದ ರಾಹುಲ್ ನನ್ನು ತಲ್ವಾರ್, ಚಾಕು, ಚೂರಿಗಳನ್ನು ಬಳಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು..ಪ್ರಕರಣ ನಡೆದ ಎರಡು ವಾರಗಳ ನಂತರ ಮಂಗಳೂರು ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ರೌಡಿಶೀಟರ್ ಕಕ್ಕೆ ರಾಹುಲ್ ಕೊಲೆ ಪ್ರಕರಣ. ಕೊಲೆ ಮಾಡಿದ್ದ ನಾಲ್ವರು ಸೇರಿ ಒಟ್ಟು 6 ಜನರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಮಾರಕಾಸ್ತ್ರ ವಶಕ್ಕೆ : ದುಬೈನಿಂದ ನಿಂದ ವಾಪಾಸಾಗಿದ್ದ ಮಹೇಂದ್ರ ಶೆಟ್ಟಿ, ಅಬುದಾಬಿಯಿಂದ ವಾಪಾಸ್ ಆಗಿದ್ದ ಅಕ್ಷಯ್ ಕುಮಾರ್, ಸುಶಿತ್, ದಿಲ್ಲೇಶ್ ಬಂಗೇರಾ, ಶುಭಂ, ವಿಷ್ಣು ಪಿ ಎಂಬುವವರು ಬಂಧಿತ ಆರೋಪಿಗಳು. ಬಂಧಿತರಿಂದ 3 ತಲ್ವಾರ್, 4 ಕತ್ತಿ, 3 ಚೂರಿ, 2 ಸ್ಕೂಟರ್ 5 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ದುಬೈನಲ್ಲಿ ಸೆಟಲ್ ಆಗಿದ್ದ ಮಹೇಶ್ ಶೆಟ್ಟಿ : ಆರೋಪಿಗಳ ಪೈಕಿ ಪ್ರಧಾನ ಆರೋಪಿ ಮಹೇಂದ್ರ ಶೆಟ್ಟಿ ಮತ್ತು ರಾಹುಲ್ ನಡುವೆ 2016 ರಲ್ಲಿ ದ್ವೇಷ ಆರಂಭವಾಗಿತ್ತು. ಎಮ್ಮೆಕೆರೆ ಮೈದಾನದಲ್ಲಿ ನಡೆದ ಪಂದ್ಯದ ಕೂಟದಲ್ಲಿ ಎರಡು ಗ್ಯಾಂಗ್ ನಡುವೆ ವೈಷಮ್ಯ ಸೃಷ್ಠಿಯಾಗಿತ್ತು. ಇದರ ಮುಂದುವರಿದ ಭಾಗವಾಗಿ 2019ರಲ್ಲಿ ರಾಹುಲ್ ಮಹೇಂದ್ರ ನ ಮೇಲೆ ಅಟ್ಯಾಕ್ ಮಾಡಿದ್ದ. ರಾಹುಲ್ ಮೇಲೆ ಪೊಲೀಸ್ ದೂರನ್ನೂ ಮಹೇಂದ್ರ ನೀಡಿದ್ದ. ಇಲ್ಲೇ ಇದ್ರೆ ಜೀವಕ್ಕೆ ಕುತ್ತು ಅಂತಾ ಮಹೇಂದ್ರ ಶೆಟ್ಟಿ ದುಬೈಗೆ ಹೋಗಿ ಸೆಟ್ಲಾಗಿದ್ದ.
ಬಂಧಿತರು ಹೇಳಿದ್ದೇನು?.. ಕಳೆದ ಮಾರ್ಚ್ ನಲ್ಲಿ ದುಬೈ ನಿಂದ ವಾಪಾಸ್ ಆಗಿದ್ದ ಮಹೇಂದ್ರ ಶೆಟ್ಟಿ ಮಂಗಳೂರಿನಲ್ಲಿ ಬ್ಯುಸಿನೆಸ್ ಮಾಡಿಕೊಂಡು ಸೆಟ್ಲಾಗಲು ಮುಂದಾಗಿದ್ದ. ಆದ್ರೆ ಮಹೇಂದ್ರ ಶೆಟ್ಟಿ ವಿದೇಶದಿಂದ ಬಂದ್ರೆ ಕೊಲ್ಲುತ್ತೇನೆ ಅಂತಾ ರಾಹುಲ್ ಮಾತನಾಡಿದ್ದ ಅನ್ನೋದು ಮಹೇಂದ್ರನ ಕಿವಿಗೆ ಬಿದ್ದಿತ್ತು. ಈ ಭಯದಿಂದ ರಾಹುಲ್ ನನ್ನು ಕೊಲೆ ಮಾಡಿದ್ದಾಗಿ ಬಂಧಿತ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಮಹೇಂದ್ರ ಶೆಟ್ಟಿ ಜೊತೆಗೆ ರಾಹುಲ್ ಜೊತೆ ದ್ವೇಷ ಇಟ್ಟುಕೊಂಡಿದ್ದ ಕಾರ್ತಿಕ್ ಶೆಟ್ಟಿ ಎಂಬಾತನೂ ಈ ಕೊಲೆಗೆ ಕೈ ಜೋಡಿಸಿದ್ದ. ಇವರಿಬ್ಬರ ಗ್ಯಾಂಗ್ ಸೇರಿ ರಾಹುಲ್ ನನ್ನು ಹತ್ಯೆ ಮಾಡಿರೋದಾಗಿ ತನಿಖೆಯಿಂದ ತಿಳಿದು ಬಂದಿದೆ.
ರಕ್ತಸಿಕ್ತ ರೌಡಿಸಂಗೆ ಮುನ್ನುಡಿ ಆಯ್ತಾ?.. ಎಮ್ಮೆಕೆರೆ ಮತ್ತು ಹೊಯಿಗೆ ಬಜಾರ್ ತಂಡದ ನಡುವಿನ ಸಂಘರ್ಷದ ಇತಿಹಾಸ ನಿನ್ನೆ ಮೊನ್ನೆಯದಲ್ಲ. ಎರಡೂ ಹುಲಿವೇಷ ತಂಡಗಳ ಮಧ್ಯೆ ಆಗಾಗ್ಗೆ ಹುಟ್ಟಿಕೊಳ್ತಾ ಇದ್ದ ಸಣ್ಣಪುಟ್ಟ ಗಲಾಟೆಗಳೇ ಸದ್ಯ ರಾಹುಲ್ ಹತ್ಯೆ ಮೂಲಕ ಮತ್ತೆ ಮಂಗಳಾದೇವಿ ಭಾಗದ ರಕ್ತಸಿಕ್ತ ರೌಡಿಸಂಗೆ ಮುನ್ನುಡಿಯಿಟ್ಟಿದೆ. ಸದ್ಯ ಮೂರು ವರ್ಷದ ಹಿಂದೆ ಎಮ್ಮೆಕೆರೆ ತಂಡದ ಜೊತೆ ಗಲಾಟೆ ಮಾಡಿ ಚೂರಿ ಇರಿದಿದ್ದ ರಾಹುಲ್ ಅದೇ ಎಮ್ಮೆಕೆರೆ ಟೀಂನ ಹುಡುಗರ ಕೈಯಿಂದ ಹೆಣವಾಗಿದ್ದಾನೆ. ಮೂರು ವರ್ಷದ ಹಿಂದೆ ಎಮ್ಮೆಕೆರೆ ಟೀಂ ಹುಡುಗರ ಕೊಲೆಗೆ ಯತ್ನಿಸಿದ್ದ ರಾಹುಲ್ ಜೀವಕ್ಕೆ ಆ ಬಳಿಕ ಬೆದರಿಕೆ ಇತ್ತು.
ಯಾವುದೇ ಕ್ಷಣ ರಾಹುಲ್ ಪ್ರತೀಕಾರ ಆಗುತ್ತೆ ಅಂತಾನೂ ಹೇಳಲಾಗಿತ್ತು. ಇದೇ ಕಾರಣಕ್ಕೆ ರಾಹುಲ್ ಎಮ್ಮೆಕೆರೆ ಭಾಗಕ್ಕೆ ಹೋಗ್ತಾನೇ ಇರಲಿಲ್ಲ. ಗೆಳೆಯರ ಸೂಚನೆಯಂತೆ ಅಲರ್ಟ್ ಆಗಿಯೇ ಇರ್ತಿದ್ದ. ಆದ್ರೆ ಕೋಳಿ ಅಂಕದ ಹುಚ್ಚನಾಗಿದ್ದ ರಾಹುಲ್ ಎಲ್ಲೇ ಕೋಳಿ ಅಂಕ ನಡೆದ್ರೂ ಅಲ್ಲಿ ಹಾಜರಾಗ್ತಿದ್ದ. ಹೀಗಾಗಿ ಎಪ್ರಿಲ್ 28 ರ ಗುರುವಾರ ಬೋಳೂರಿನ ಮಾರಿಯಮ್ಮ ದೇವಸ್ಥಾನದ ಮಾರಿ ಪೂಜೆಯ ಹಿನ್ನೆಲೆ ಎಮ್ಮೆಕೆರೆಯ ಕ್ರಿಕೆಟ್ ಗ್ರೌಂಡ್ ನಲ್ಲಿ ಕೋಳಿ ಅಂಕ ಆಯೋಜಿಸಲಾಗಿತ್ತು. ಮೊದಲೇ ಕೋಳಿ ಅಂಕದ ಹುಚ್ಚು ತಲೆಗೆ ಅಡರಿಸಿಕೊಂಡಿದ್ದ ರಾಹುಲ್ ತನ್ನ ಗೆಳೆಯನ ಜೊತೆ ಎಮ್ಮೆಕೆರೆಗೆ ಎಂಟ್ರಿ ಕೊಟ್ಟಿದ್ದ. ಮಧ್ಯಾಹ್ನ 3.30ರ ಸುಮಾರಿಗೆ ಬರೋಬ್ವರಿ ಮೂರು ವರ್ಷದ ಬಳಿಕ ರಾಹುಲ್ ಎಮ್ಮೆಕೆರೆಗೆ ಬಂದಿದ್ದ. ಇದನ್ನ ಅಲ್ಲಿದ್ದ ಎಮ್ಮೆಕೆರೆಯ ಹುಡುಗರು ನೋಡಿ ಮಹೇಂದ್ರ ಶೆಟ್ಟಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸಿಕ್ಕ ಸಿಕ್ಕಲ್ಲಿ ಕೊಚ್ಚಿ ಕೊಲೆಗೈದ್ರು : ಹೇಳಿಕೇಳಿ ಅದು ಎಮ್ಮೆಕೆರೆ. ಮೂರು ವರ್ಷದ ಹಿಂದೆ ಇದೇ ಎಮ್ಮೆಕೆರೆ ಟೀಂನ ಹುಡುಗರಿಗೆ ಚೂರಿ ಹಾಕಿದ್ದ ರಾಹುಲ್. ಸದ್ಯ ಒಬ್ಬಂಟಿಯಾಗಿ ಅದೇ ಎಮ್ಮೆಕೆರೆಯಲ್ಲಿ ಇದ್ದಾನೆ ಅನ್ನೋ ವಿಚಾರ ತಿಳಿದು ಎಲ್ಲಾ ರೆಡಿ ಮಾಡಿಕೊಂಡ ಮಹೇಂದ್ರನ ಟೀಂ ಫೀಲ್ಡಿಗಿಳಿಯುತ್ತೆ. ಸಂಜೆ 5.45ರ ಹೊತ್ತಿಗೆ ರಾಹುಲ್ ಕೋಳಿ ಅಂಕ ಮುಗಿಸಿ ತನ್ನ ಗೆಳೆಯನ ಜೊತೆ ಸ್ಕೂಟರ್ ಬರುತ್ತಿದ್ದ ಹೊತ್ತಿಗೆ ಮಹೇಂದ್ರ ನ ಟೀಂ ದಾಳಿ ನಡೆಸಿದೆ. ಸ್ಕೂಟರ್ ನಿಂದ ಎಳೆದೊಯ್ದು ಎಮ್ಮೆಕೆರೆ ಗ್ರೌಂಡ್ ನ ದೈವಸ್ಥಾನದ ಎದುರಲ್ಲೇ ಯದ್ವಾತದ್ವಾ ತಲ್ವಾರು ಬೀಸಿದ್ದಾರೆ.ತಲೆ, ಎದೆ, ಭುಜ, ಕತ್ತು..ಹೀಗೆ ಸಿಕ್ಕಸಿಕ್ಕಲಿ ನಾಲ್ವರು ಸೇರಿಕೊಂಡು ಕೊಚ್ಚಿ ಕೊಂದಿದ್ದಾರೆ. ಒಟ್ಟಿನ್ನಲ್ಲಿ ಎಮ್ಮೆಕೆರೆ ಮತ್ತು ಹೊಯಿಗೆ ಬಜಾರ್ ಟೀಂನ ಸಂಘರ್ಷ ರಾಹುಲ್ ಕೊಲೆಯ ಮೂಲಕ ಮತ್ತೆಜೀವ ಪಡೆದಿದೆ. ಕೃತ್ಯ ದಲ್ಲಿ ಓಟ್ಟು ಹದಿಮೂರು ಮಂದಿ ಆರೋಪಿಗಳು ಭಾಗವಹಿಸಿದ್ದು ಉಳಿದ ಆರೋಪಿಗಳಿಗಾಗಿ ಪೊಲೀಸರು ತಲಾಶ್ ಆರಂಭಿಸಿದ್ದಾರೆ..
Discover more from Coastal Times Kannada
Subscribe to get the latest posts sent to your email.
Discussion about this post