ಮಂಗಳೂರು, ಜೂ 11: ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ಸಲೀಂ ಆಗಿ ಮರಳಿ ಮನೆಗೆ ಬಂದು ತಾಯಿಯನ್ನು ಸೇರಿದ ಅಪರೂಪದ ವ್ಯಕ್ತಿ. 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದೊಂದಿಗೆ ಆಕರ್ಷಿತನಾಗಿ ಓಡಿಹೋಗಿದ್ದ ಈತ, ಇಷ್ಟು ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ನೆಲೆಸಿದ್ದ.
ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ಮನೆಗೆ ಮರಳಿದ್ದು, ಆ ಮೂಲಕ ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ಕೊನೆಗೂ ನನಸಾಗಿದೆ.

ಮಹಾರಾಷ್ಟ್ರದಲ್ಲಿ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದ ಸತೀಶ್!: ಮನೆ ಬಿಟ್ಟು ಹೋದ ಬಳಿಕ ಸರ್ಕಸ್ ತಂಡದ ಜೊತೆ ದೇಶದ ವಿವಿಧೆಡೆ ಸುತ್ತಾಡಿದ ಸತೀಶ್, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆಯ ನಡುವೆ ಆತ ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದ. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಈತನಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಇಷ್ಟು ವರ್ಷಗಳ ಕಾಲ ಹೊರ ರಾಜ್ಯದಲ್ಲೇ ಕಳೆದಿದ್ದರಿಂದ ಸತೀಶ್‌ಗೆ ತನ್ನ ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿದ್ದು, ಈಗ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಮಾತನಾಡುತ್ತಿದ್ದಾನೆ.
ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಬಂದಾಗ ಮರುಕಳಿಸಿದ ನೆನಪು : ಜೂನ್ 9 ರಂದು ಸತೀಶ್ (ಸಲೀಂ) ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯ ಮನವರಿಕೆಯಾಗಿದೆ. ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸಿ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ.
ಸಾಯುವ ಮುನ್ನ ಮಗನ ನೋಡಬೇಕೆಂಬ ತಾಯಿ ಕನಸು ನನಸು!: ಇನ್ನು ಇತ್ತ 26 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗನಿಗಾಗಿ ಇಲ್ಲಿ ತಾಯಿ ಜೀವ ಹಂಬಲಿಸುತ್ತಿತ್ತು. ತಾನು ಸಾಯುವ ಮುನ್ನ ಮಗನ ಮುಖ ನೋಡಬೇಕು ಎಂದು ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದ ಅವರ ತಾಯಿಯ ಆಸೆ ಕೊನೆಗೂ ಈಡೇರಿದೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post