ಉಳ್ಳಾಲ: ನಸುಕಿನ ವೇಳೆ ಬಡಿದ ಭಾರೀ ಶಬ್ದದ ಸಿಡಿಲು ಉಳ್ಳಾಲದ ರಾಣಿಪುರದಲ್ಲಿ ಅಪ್ಪಳಿಸಿದ್ದು ಜಿನಸಿ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ. ಅಂಗಡಿಯ ಕಟ್ಟಡದಲ್ಲೇ ಇದ್ದ ಮಾಲೀಕರ ಮನೆಗೂ ಬೆಂಕಿ ವ್ಯಾಪಿಸಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.
ಸಿಡಿಲು ಬಡಿದ ಸಂದರ್ಭದಲ್ಲಿ ಪೀಟರ್, ಅವರ ಪತ್ನಿ ಅಸುಂತ ಮರಿಯ ಡಿಕ್ರೂಜ್ ಮತ್ತು ಮಗ ಪ್ರೀತಮ್ ಮನೆಯಲ್ಲಿ ನಿದ್ರಿಸುತ್ತಿದ್ದರು. ದಾರಿಯಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಅಂಗಡಿಗೆ ಬೆಂಕಿ ಬಿದ್ದಿರುವುದನ್ನು ಕಂಡು ಮನೆಯವರನ್ನು ಎಬ್ಬಿಸಿ ಮಾಹಿತಿ ತಿಳಿಸಿದ್ದರು. ತಕ್ಷಣ ಪೀಟರ್ ಅವರು ಅಗ್ನಿ ಶಾಮಕ ದಳಕ್ಕೆ ಕರೆಮಾಡಿದ್ದರು.
ಅಂಗಡಿಯಲ್ಲಿದ್ದ ದಾಸ್ತಾನಿದ್ದ ದಿನಸಿ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಮೂರು ರೆಫ್ರಿಜರೇಟರ್‌ಗಳೂ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿವೆ. ಅಂಗಡಿ ಮತ್ತು ಮನೆ ಇರುವ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಸ್ಥಳೀಯ ಮುಖಂಡರಾದ ನವೀನ್ ಡಿಸೋಜ, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Discussion about this post