ಮಂಗಳೂರು: ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಚಾಲನೆ ನೀಡಿದರು.
ಅಕ್ಟೋಬರ್ ತಿಂಗಳಿನಿಂದ ರಾಜ್ಯದ 40 ಲಕ್ಷ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ ನಡೆಸಲಾಗುವುದು. 2013ರಲ್ಲಿ ಸಿದ್ಧರಾಮಯ್ಯ ಸರಕಾರ ಜಾರಿಗೆ ತಂದಿದ್ದ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದ್ದು, ಅದನ್ನು ಮುಂದುವರಿಸಲಾಗುವುದು ಎಂದುರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಿನ ನೆಹರೂ ಮೈದಾನದಲ್ಲಿ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಯೋಜನೆಯಡಿ ಸರಕಾರಿ ಪದವಿ ಹಾಗೂ ಅನುದಾನಿತ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ (ಮುಟ್ಟಿನ ಕಪ್) ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ 10ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಗುವುದು. ಪದವಿ ತರಗತಿಗಳ ವಿದ್ಯಾರ್ಥಿನಿಯರಿಗೆ ಮೈತ್ರಿ ಕಪ್ ಆರಂಭಿಕವಾಗಿ ದ.ಕ. ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು 15000 (ದ.ಕ. ಜಿಲ್ಲೆಯಲ್ಲಿ 11000 ಹಾಗೂ ಚಾಮರಾಜನಗರದ 4 ಸಾವಿರ)ವಿದ್ಯಾರ್ಥಿನಿಯರಿಗೆ ವಿತರಿಸಲಾಗುತ್ತಿದ್ದು, ಈ ಪ್ರಾಯೋಗಿಕ ವಿತರಣೆಯ ಬಳಿಕ ಇದನ್ನು ರಾಜ್ಯದೆಲ್ಲೆಡೆ ಉಚಿತವಾಗಿ ವಿತರಿಸಲಾಗುವುದು ಎಂದರು. ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡುವ ಸಲುವಾಗಿ 2013-14ನೆ ಸಾಲಿನಲ್ಲಿ ಸಿದ್ಧರಾಮಯ್ಯ ಸರಕಾರ ಈ ಸ್ಯಾನಿಟರಿ ಪ್ಯಾಡ್ ವಿತರಣೆ ಕಾರ್ಯಕ್ರಮ ಆರಂಭಿಸಿತ್ತು. ಮುಟ್ಟಿನ ಸಂದರ್ಭದಲ್ಲಿ ಅನಾನುಕೂಲತೆಯಿಂದಾಗಿ ಸಾಕಷ್ಟು ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳ ತರಗತಿಗೆ ಹಾಜರಾಗಲು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಈ ಯೋಜನೆ ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್, ಶಾಸಕ ಅಶೋಕ್ ಕುಮಾರ್ ರೈ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕ ಡಾ. ಎಂ. ಇಂದುಮತಿ, ವಿಧಾನ ಪರಿಷತ್ ಶಾಸಕ ಕೆ. ಮಂಜುನಾಥ ಭಂಡಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಯೋಜನಾ ನಿರ್ದೇಶಕ ಡಾ. ಶ್ರೀನಿವಾಸ್ ಜಿ.ಎನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗಿಯ ಸಹ ನಿರ್ದೇಶಕಿ ಡಾ.ರಾಜೇಶ್ವರಿ ದೇವಿ ಎಚ್. ಆರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕಿ ಡಾ. ವೀಣಾ ವಿ., ಮಂಗಳೂರು ಮೇಯರ್ ಸುಧೀರ್ ಶೆಟ್ಟಿ, ಖ್ಯಾತ ಚಲನಚಿತ್ರ ನಟಿ ಸಪ್ತಮಿ ಗೌಡ ಭಾಗವಾಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post