ಮಂಗಳೂರು: ಕಿನ್ನಿಗೋಳಿಯಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ತಾಯಿಗೆ ರಿಕ್ಷಾ ಢಿಕ್ಕಿಯಾಗಿ ಅದರಡಿಗೆ ಬಿದ್ದಿದ್ದ ತಾಯಿಯನ್ನು ತತ್‌ಕ್ಷಣವೇ ಧಾವಿಸಿ ಬಂದು ರಕ್ಷಿಸಿದ ಬಾಲಕಿ ವೈಭವಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಮಂಗಳವಾರ ತಮ್ಮ ಕಚೇರಿಗೆ ಕರೆಸಿ ಸಮ್ಮಾನಿಸಿದರು.
7ನೇ ತರಗತಿಯ ವಿದ್ಯಾರ್ಥಿನಿ ವೈಭವಿ ಅವರಿಗೆ ಪೇಟ, ಹಾರ ತೊಡಿಸಿ ಸಮ್ಮಾನಿಸಿದ ಜಿಲ್ಲಾಧಿಕಾರಿ ಬಾಲಕಿಯ ಸಮಯ ಪ್ರಜ್ಞೆ ಮತ್ತು ಧೈರ್ಯವನ್ನು ಶ್ಲಾಘಿಸಿದರು. ವೈಭವಿಯ ಈ ಪ್ರಜ್ಞೆ ಎಲ್ಲರಿಗೂ ಮಾದರಿಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ಇಂತಹ ಸಮಯ ಪ್ರಜ್ಞೆ ಮತ್ತು ಧೈರ್ಯ ಮೂಡಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ| ಜಿ. ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಉಪನಿರ್ದೇಶಕ ಹೇಮಲತಾ, ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಮತ್ತು ವೈಭವಿ ಪಾಲಕರು ಉಪಸ್ಥಿತರಿದ್ದರು. ವೈಭವಿಯ ಧೈರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಿಕ್ಷಾದಡಿಗೆ ಬಿದ್ದು ಗಾಯಗೊಂಡಿರುವ ಮಹಿಳೆಗೆ ಸುರತ್ಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post