ಮಂಗಳೂರು, ಸೆ.11: ನಗರದ ಸಂತ ಅಲೋಶಿಯಸ್ ಕಾಲೇಜು ಕ್ಯಾಂಪಸ್ ನಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ಸಮೋಸ ಮಾರುತ್ತಲೇ ವಿದ್ಯಾರ್ಥಿಗಳ ಬಾಯಲ್ಲಿ ‘ಸಮೋಸ ಅಜ್ಜ’ ಎಂದೇ ಹೆಸರು ಪಡೆದಿದ್ದ ಬಾದಾಮಿ ಮೂಲದ ಮದುಕೇಶ್ವರ್ ಮಲ್ಲಿಕಾರ್ಜುನ ಮುಡೆಯಪ್ಪ ಮಳಗಿ(84) ವಯೋಸಹಜ ಅಸೌಖ್ಯದಿಂದ ನಿಧನರಾಗಿದ್ದಾರೆ.
40 ವರ್ಷಗಳ ಹಿಂದೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಿಂದ ಮಳಗಿಯಿಂದ ಇವರು ತನ್ನ ಅಳಿಯನೊಂದಿಗೆ ಮಂಗಳೂರಿಗೆ ಬಂದಿದ್ದರು. ಬಾವುಟಗುಡ್ಡೆಯ ಅಲೋಶಿಯಸ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೋಸ ಮಾರಲು ಆರಂಭಿಸಿದ್ದರು. ನಗುಮುಖದೊಂದಿಗೆ ಬಿಸಿ ಬಿಸಿ ಸಮೋಸ ಕೊಡುತ್ತಿದ್ದ ಕಾರಣಕ್ಕೆ ಬಹುಬೇಗನೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದರು. ಆನಂತರ, ಸಮೋಸ ಜೊತೆಗೆ ಚಿಕ್ಕಿ, ನೆಲಗಡಲೆ, ಜಿಲೇಬಿ, ಬರ್ಫಿಗಳನ್ನೂ ಮಾರತೊಡಗಿದ್ದರು. ದಿನವೂ ಸಂಜೆ, ಮಧ್ಯಾಹ್ನ ಅಲೋಶಿಯಸ್ ಕಾಲೇಜು ಆವರಣದಲ್ಲಿ ತಿಂಡಿಗಳನ್ನು ಮಾರುತ್ತಿದ್ದರಿಂದ ಮಕ್ಕಳಿಗೆ ನೆಚ್ಚಿನ ತಾತನೂ ಆಗಿದ್ದರು.
ಮಲ್ಲಿಕಾರ್ಜುನ ಅವರು ಪತ್ನಿಯೊಂದಿಗೆ ಮಂಗಳೂರು ನಗರದ ಕಾವೂರಿನಲ್ಲಿ ನೆಲೆಸಿದ್ದರು. ಇವರಿಗೆ ನಾಲ್ವರು ಹೆಣ್ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಒಬ್ಬ ಮಗನಿದ್ದು, ಆತನೂ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದಾನೆ. ಈ ಅಜ್ಜ ಮಾತ್ರ ದಿನವೂ ಸಮೋಸ ಮಾರುವುದನ್ನೇ ಕೆಲಸ ಮಾಡಿಕೊಂಡಿದ್ದರು. ಹತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಧರಣಿ ಕುಳಿತು ಗಮನಸೆಳೆದಿದ್ದ ಅಣ್ಣಾ ಹಜಾರೆ ರೀತಿಯಲ್ಲೇ ಕಾಣುತ್ತಿದ್ದ ಇವರನ್ನೂ ಅಣ್ಣಾ ಅಜ್ಜಾ ಎಂದೂ ವಿದ್ಯಾರ್ಥಿಗಳು ಕರೆಯತೊಡಗಿದ್ದರು. ತಲೆಗೆ ಗಾಂಧಿ ಟೋಪಿ, ಕನ್ನಡಕ, ಬಿಳಿ ಜುಬ್ಬಾ ಮತ್ತು ಬಿಳಿ ಕಚ್ಚೆಯನ್ನು ಧರಿಸಿ ಅಪ್ಪಟ ಗಾಂಧಿವಾದಿಯಂತೆ ಕಾಣುತ್ತಿದ್ದರು. ಹಣೆಗೊಂದು ನಾಮವೂ ಅವರ ಹೆಗ್ಗುರುತಾಗಿತ್ತು. ಹೀಗಾಗಿ ನೋಡುವುದಕ್ಕೆ ಅಣ್ಣಾ ಹಜಾರೆ ರೀತಿಯಲ್ಲೇ ಇವರಲ್ಲೂ ಆಕರ್ಷಣೆ ಇತ್ತು.
ವಯಸ್ಸು ಮಾಗಿದ್ದರೂ, ಅವರೆಂದೂ ತನ್ನ ವೃತ್ತಿಗೆ ನಿವೃತ್ತಿ ಕೊಟ್ಟಿರಲಿಲ್ಲ. ದಿನವೂ ಮಧ್ಯಾಹ್ನ ಊಟದ ಸಮಯಕ್ಕೆ ಮತ್ತು ಸಂಜೆ ಶಾಲೆ ಬಿಡುವ ಸಮಯದಲ್ಲಿ ತಿಂಡಿಗಳನ್ನು ತಂದು ಕೊಡುತ್ತಿದ್ದರು. ಹೀಗಾಗಿ ಕಳೆದ 40 ವರ್ಷಗಳಲ್ಲಿ ಅಲೋಶಿಯಸ್ ಕಾಲೇಜಿನಲ್ಲಿ ಕಲಿತವರೆಲ್ಲ ಅಜ್ಜನ ನೆನಪನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಇವರನ್ನು ಸಮೋಸ ಅಜ್ಜ, ಚಿಕ್ಕಿ ಅಜ್ಜ, ಶೇಂಗಾ ಅಜ್ಜ ಎಂದೂ ಕರೆಯುತ್ತಿದ್ದರು. ಮಲ್ಲಿಕಾರ್ಜುನ ಅಜ್ಜ 2010ರಲ್ಲಿ ಅಲೋಶಿಯಸ್ ಕಾಲೇಜಿನ ಸಾರಂಗ್ ಎಫ್ಎಂ ರೇಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪಾಲ್ಗೊಂಡು ಗಾಂಧೀಜಿ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಕೇಳಿದ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬಂದಿ ಸರಳ ವ್ಯಕ್ತಿತ್ವಕ್ಕೆ ಮಾರು ಹೋಗಿದ್ದರು.
Discussion about this post