ಮಂಗಳೂರು: ನಗರದ ಕಂಕನಾಡಿ ಮಾರ್ಕೆಟ್ ಬಳಿ ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್, ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಮಂಗಳೂರು ಪೂರ್ವ ಠಾಣೆಯ ಪೊಲೀಸರು ಕೃತ್ಯ ನಡೆದ 24 ತಾಸಿನೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ತಾಲೂಕು ಅಡ್ಯಾರ್‌ಪದವು ಭರಿರತ್ ಮಂಜಿಲ್ ನಿವಾಸಿ ಅಬ್ದುಲ್ ಅಕ್ರಂ (33) ಬಂಧಿತ ಆರೋಪಿ.
ಆರೋಪಿಯು ಡಿ. 8ರ ರಾತ್ರಿ ಕಂಕನಾಡಿ ಮಾರ್ಕೆಟ್ ಬಳಿ ಪಾರ್ಕ್ ಮಾಡಿದ್ದ ಕ್ರೇಟಾ ಕಾರಿನ ಗ್ಲಾಸ್ ಒಡೆದು ಕಾರಿನ ಒಳಗಡೆ ಇದ್ದ 6,80,000 ರೂ. ಮೌಲ್ಯದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಇರುವ ವ್ಯಾನಿಟ್ ಬ್ಯಾಗ್ ಅನ್ನು ಕಳ್ಳತನ ಮಾಡಿದ್ದಾನೆ. ಬಳಿಕ ದೂರುದಾರರು ಬಂದು ನೋಡಿದಾಗ ಘಟನೆಯು ಬೆಳಕಿಗೆ ಬಂದಿದ್ದು, ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ದೂರಿನ ಮೇರೆಗೆ ಕಲಂ 303(2) ಬಿಎನ್ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು 24 ಗಂಟೆಯೊಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗುತ್ತಾರೆ. ಆರೋಪಿಯಿಂದ ಕಳವು ಮಾಡಿದ ಚಿನ್ನಾಭರಣ ಮತ್ತು ಲ್ಯಾಪ್ ಟಾಪ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಕ್ಸೆಸ್ ಸ್ಕೂಟರ್ ಸೇರಿದಂತೆ ಒಟ್ಟು 7,30,000ರೂ. ಮೌಲ್ಯದ ಬೆಲೆ ಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ ವಾಲ್ ಅವರ ಮಾರ್ಗದರ್ಶನದಂತೆ ಸಿದ್ದಾರ್ಥ ಗೋಯಲ್ (ಕಾ&ಸು) ಮತ್ತು ಕೆ.ರವಿಶಂಕರ್ ಡಿಸಿಪಿ ಕ್ರೈಂ ಅವರ ನಿರ್ದೇಶನದಂತೆ ಹಾಗೂ ಮಂಗಳೂರು ಕೇಂದ್ರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರತಾಪ್ ಸಿಂಗ್ ಥೋರಾಟ್ ಅವರ ನೇತೃತ್ವದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಸೋಮಶೇಖರ್ ಜೆ.ಸಿ, ಪಿಎಸ್‌ಐ ಉಮೇಶ್ ಕುಮಾರ್ ಎಂ.ಎನ್ ಮತ್ತು ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ವರ್ಗ ಈ ಕಾರ್ಯಚರಣೆಯಲ್ಲಿ ಭಾಗವಹಿಸಿರುತ್ತಾರೆ.
Discover more from Coastal Times Kannada
Subscribe to get the latest posts sent to your email.
Discussion about this post