ಬೆಂಗಳೂರು ಜ.11 : ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿರುವ ಶ್ರೀಮತಿ ರಾಜೇಶ್ವರಿ ಬಿ ಶೆಟ್ಟಿ ಅವರಿಗೆ ಸೇರಿದ ಆಸ್ತಿ ಹರಾಜು ಪ್ರಕರಣದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಕರ್ನಾಟಕ ಬ್ಯಾಂಕ್ ಗೆ ಕರ್ನಾಟಕದ ಸಾಲ ವಸೂಲಾತಿ ಪ್ರಾಧಿಕಾರವು ಜ.11 ರಂದು ಆದೇಶವನ್ನು ನೀಡಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ತಿಂಗಳ ಹಿಂದೆ ಕರ್ನಾಟಕದ ಉಚ್ಚನ್ಯಾಯಾಲಯವು ಆಸ್ತಿ ಹರಾಜು ತಡೆಯಾಜ್ಞೆ ನೀಡುವಾಗ ಸಾಲದ ಖಾತೆಗೆ ರೂ .20 ಲಕ್ಷ ಪಾವತಿಸುವಂತೆ ಆದೇಶಿಸಿತ್ತು. ಮೊದಲಹಂತವಾಗಿ ರೂ. 28 ಲಕ್ಷವನ್ನು ಪಾವತಿಸಿದ್ದರು. ಮತ್ತೆ ಪುನಃ ಹರಾಜು ಪ್ರಕ್ರಿಯೆಗೆ ಮುಂದುವರೆದ ಕರ್ನಾಟಕ ಬ್ಯಾಂಕ್ನ ಹರಾಜು ನೋಟೀಸನ್ನು ಪ್ರಶ್ನಿಸಿ ಶ್ರೀಮತಿ ರಾಜೇಶ್ವರಿ ಬಿ ಶೆಟ್ಟಿಯವರು ರಿಟ್ ಅರ್ಜಿ ಸಲ್ಲಿಸಿದಾಗ, ಮಾನ್ಯ ಉಚ್ಚ ನ್ಯಾಯಾಲಯವು ಷರತುಬದ್ದ ತಡೆಯಾಜ್ಞೆ ನೀಡಿದ್ದು ಅದರ ಪ್ರಕಾರ ರೂ.20 ಲಕ್ಷ ವನ್ನುಕರ್ನಾಟಕ ಬ್ಯಾಂಕ್ ನ ಸಾಲದ ಖಾತೆಗೆ ಪಾವತಿಸಿದ್ದರು.
ಈ ತಡೆಯಾಜ್ಞೆಯನ್ನು ಪ್ರಶ್ನಿಸಿ ಕರ್ನಾಟಕ ಬ್ಯಾಂಕ್ ಮಾನ್ಯ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ವಿಭಾಗೀಯ ಪೀಠವು ಕರ್ನಾಟಕ ಬ್ಯಾಂಕ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿ, ಶ್ರೀಮತಿ ರಾಜೇಶ್ವರಿ ಬಿ ಶೆಟ್ಟಿಯವರು ಮೇಲ್ಮನವಿಯನ್ನು ಸಾಲ ವಸೂಲಾತಿ ಪ್ರಾಧಿಕಾರದಲ್ಲಿ ಸಲ್ಲಿಸಬೇಕೆಂದು ಆದೇಶಿಸಿತ್ತು. ಜ.11 ರಂದು ನಡೆದ ವಿಚಾರಣೆಯಲ್ಲಿ ಸಾಲ ವಸೂಲಾತಿ ಪ್ರಾಧಿಕಾರವು ಆಸ್ತಿ ಹರಾಜಿಗೆ ಸಂಬಂಧಿಸಿದಂತೆ ಜ.21 ತನಕ ಯಥಾ ಸ್ಥಿತಿ ಯನ್ನು ಕಾಪಾಡುವಂತೆ ಕರ್ನಾಟಕ ಬ್ಯಾಂಕ್ ಗೆ ಆದೇಶಿರುತ್ತದೆ.
ಶ್ರೀಮತಿ ರಾಜೇಶ್ವರಿ ಬಿ ಶೆಟ್ಟಿಯವರ ಪರವಾಗಿ ಮೇಲ್ಮನವಿಯನ್ನು ವಕೀಲರಾದ ಸಂಧ್ಯಾ .ಯು.ಪ್ರಭುರವರು ಸಲ್ಲಿಸಿದ್ದರು.