ಉಡುಪಿ, ಜ 12 : ಪೊಲೀಸರು ಹಾಗೂ ಗೋರಕ್ಷಕರ ಕಣ್ಣಿಗೆ ಮಣ್ಣೆರಚಲು ಖತರ್ನಾಕ್ ಪ್ಲ್ಯಾನ್ ಮಾಡಿ ಕೊನೆಗೆ ದನ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ನಡೆದಿದೆ.
ಪೊಲೀಸರ ಕೈಗೆ ಸಿಕ್ಕಿಬೀಳದಂತೆ ತರಕಾರಿ ವಾಹನ, ಓಮ್ನಿ , ಮಾರುತಿ ಕಾರ್ ಗಳಲ್ಲಿ ಹೀಗೆ ಸಾಗಿಸುತ್ತಿದ್ದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಇದೀಗ ಅಕ್ರಮ ಗೋ ಸಾಗಾಟಕ್ಕೆ ಮದುವೆ ವಾಹನದ ಟಚ್ ನೀಡಿ ದಾರಿತಪ್ಪಿಸಲೆತ್ನಿಸಿದ್ದು, ಸುಮಾರು 16 ದನಗಳನ್ನು ಸಾಗಾಟ ಮಾಡಲು ಮುಂದಾಗಿ ಸಿಕ್ಕಿಬಿದ್ದಿದ್ದಾರೆ.

ಪೊಲೀಸರ ಕೈಗೆ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಿದ್ದ ಖದೀಮರು ,ಇನ್ನೋವಾ ಕಾರಿಗೆ ಮದುವೆ ವಾಹನದಂತೆ ಸಿಂಗರಿಸಿ, ದಾರಿ ತಪ್ಪಿಸಲೆತ್ನಿಸಿ ಅದರ ಹಿಂದೆ ಪಿಕಪ್ ವಾಹನದಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದರು. ಆದರೆ ಅನುಮಾನ ಬಂದು ಶಿರ್ವ ವ್ಯಾಪ್ತಿಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ ವೇಳೆ ಗೋ ಕಳ್ಳರ ಅಕ್ರಮ ತಂತ್ರ ಬೆಳಕಿಗೆ ಬಂದಿದೆ.
ಎರಡು ವಾಹನದಲ್ಲಿ 16ಕ್ಕೂ ಹೆಚ್ಚು ಹಸುಗಳು ಇರುವುದು ಕಂಡುಬಂದಿದೆ. ಕೈಕಾಲು ಹಾಗೂ ಕುತ್ತಿಗೆಯನ್ನು ಬಿಗಿದ ಕಾರಣ ಎರಡು ಹಸುಗಳು ವಾಹನದಲ್ಲೇ ಸಾವನ್ನಪ್ಪಿದ್ದವು. ಇದರಿಂದ ಆಕ್ರೋಶಗೊಂಡ ಹಿಂದು ಜಾಗರಣ ವೇದಿಕೆ ಸದಸ್ಯರು ಕಾರಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ವಿಷಯ ತಿಳಿದು ಕಾಪು ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಕಳ್ಳರು ವಾಹನ ಬಿಟ್ಟು ಪರಾರಿಯಾಗಿದ್ದಾರೆ. ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.