ಉಡುಪಿ: ಹಿಜಾಬ್ ವಿಷಯವಾಗಿ ರಾಜ್ಯದ ಹಲವು ಕಾಲೇಜುಗಳಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ರೂಟ್ ಮಾರ್ಚ್ ನಡೆಸಿದ್ದಾರೆ.
ಜಿಲ್ಲೆಯ ಹಲವು ಬೀದಿಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ರೂಟ್ ಮಾರ್ಚ್ ನಡೆದಿದ್ದು, ಯಾವುದೇ ಅಹಿತಕರ ಘಟನೆಯೂ ನಡೆಯದಂತೆ ಎಚ್ಚರ ವಹಿಸಲು ಈ ರೂಟ್ ಮಾರ್ಚ್ ನಡೆಸಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
238 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಹಾಗೂ 50 ಪೊಲೀಸ್ ಅಧಿಕಾರಿಗಳು, ಎಸ್ ಪಿ ವಿಷ್ಣುವರ್ಧನ್ ಹಾಗೂ ಡಿವೈಎಸ್ ಪಿ ಸಿದ್ದಲಿಂಗಪ್ಪ ರೂಟ್ ಮಾರ್ಚ್ ನಲ್ಲಿ ಭಾಗಿಯಾಗಿದ್ದರು.
ಇದಕ್ಕೂ ಮುನ್ನ ರೂಟ್ ಮಾರ್ಚ್ ನ್ನು ಕಾಪು ಟೌನ್ ನಲ್ಲಿ ನಡೆಸಲಾಗಿತ್ತು. ಕಾಪು ಸರ್ಕಲ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಗಿತ್ತು. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಉಡುಪಿಗೆ ಕ್ಷಿಪ್ರ ಕಾರ್ಯಪಡೆ (ಆರ್ ಎಎಫ್) ಸಹ ಆಗಮಿಸಿದ್ದು, ಹಿಜಾಬ್ ವಿವಾದ ಮೊದಲು ಹುಟ್ಟಿಕೊಂಡಿದ್ದು ಉಡುಪಿಯಲ್ಲಾದ್ದರಿಂದ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಿವೆ.
ಒಂದು ಬೆಟಾಲಿಯನ್ ಆರ್ ಎಎಫ್ ಪಡೆ ಆಗಮನ :
ಮಂಗಳೂರು, ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಆರ್ ಎಎಫ್ ಒಂದು ಬೆಟಾಲಿಯನನ್ನು ಕರೆಸಿಕೊಳ್ಳಲಾಗಿದೆ. ಸದ್ಯಕ್ಕೆ 70 ಮಂದಿ ಮಂಗಳೂರಿಗೆ ಆಗಮಿಸಿದ್ದು ಅವರನ್ನು ಪಣಂಬೂರಿನಲ್ಲಿ ಇರಿಸಲಾಗುವುದು. ಇನ್ನೂ 60 ಮಂದಿ ಶನಿವಾರ ಬರಲಿದ್ದಾರೆ. ಅಹಿತಕರ ಘಟನಾ ಸ್ಥಳಕ್ಕೆ ಇಲ್ಲಿಂದಲೇ ತೆರಳಲಿದ್ದಾರೆ ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post