ಮಂಗಳೂರು, ಫೆ.12: ಶ್ರೀರಾಮನಿಗೆ ಅವಹೇಳನ ಮಾಡಿದ ಆರೋಪ ಸಂಬಂಧ ಸಂತ ಜೆರೋಸಾ ಶಾಲೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಅವರನ್ನು ಆಡಳಿತ ಮಂಡಳಿ ಅಮಾನತು ಮಾಡಿದೆ. ದೇವರಿಗೆ ಅವಹೇಳನ ಖಂಡಿಸಿ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಇಂದು ಪೋಷಕರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ.
ನಗರದ ಜೆಪ್ಪುನಲ್ಲಿರುವ ಜೆರೋಸಾ ಶಾಲೆಯ ಏಳನೇ ತರಗತಿ ಶಿಕ್ಷಕಿ ಪ್ರಭಾ ವಿರುದ್ಧ ಧರ್ಮ ನಿಂದನೆಯ ಕಿಚ್ಚು ಜೋರಾಗಿದ್ದು, ಶಾಲೆಯ ಮುಂಭಾಗ ನೂರಾರು ಸಂಖ್ಯೆಯಲ್ಲಿ ಆಕ್ರೋಶಿತರು ಜಮಾವಣೆಗೊಂಡಿದ್ದಾರೆ. ಹಿಂದೂ ವಿದ್ಯಾರ್ಥಿಗಳ ಪೋಷಕರೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಆಗಮಿಸಿದ್ದು, ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಲಾಗಿದೆ. ಈ ವೇಳೆ ಶಾಲೆ ಗೇಟ್ ಮುಂಭಾಗ ಶಾಸಕ ಹಾಗೂ ಪೋಷಕರನ್ನು ಪೊಲೀಸರು ತಡೆದರು.
ಶಾಲೆಯ ಮುಂಭಾಗ ಜಮಾವಣೆಗೊಂಡ ಪೋಷಕರು ಶಿಕ್ಷಕಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರತಿಭಟನಾ ನಿರತ ಪೋಷಕರ ಮುಂದೆ ಆಗಮಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕಿ ಪ್ರಭಾ ಅವರನ್ನು ಅಮಾನತು ಮಾಡಿದ್ದಾಗಿ ತಿಳಿಸಿದರು. ಅಧಿಕೃತವಾಗಿ ಲಿಖಿತವಾಗಿ ಶಾಲೆಯ ಲೆಟರ್ ಹೆಡ್ನಲ್ಲಿ ಅಮಾನತ್ತಿನ ಬಗ್ಗೆ ಸ್ಪಷ್ಟನೆ ನೀಡಲಾಗಿದ್ದು, ಮುಂದೆ ಶಿಕ್ಷಣ ಇಲಾಖೆ ಪ್ರಕರಣದ ಆಂತರಿಕ ತನಿಖೆ ನಡೆಸಲಿದೆ. ಶಿಕ್ಷಣ ಇಲಾಖೆ ತನಿಖಾ ವರದಿ ಆಧಾರದ ಮೇಲೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಶಾಸಕ ಭರತ್ ಶೆಟ್ಟಿ ಮಾತನಾಡಿ, ಸಣ್ಣ ಮಕ್ಕಳಲ್ಲಿ ಹಿಂದು ವಿರೋಧಿ ಭಾವನೆ ಬಿತ್ತುವ ಕೆಲಸ ಆಗ್ತಾ ಇದೆ. ಮಕ್ಕಳಿಗೆ ಪುಸ್ತಕದ ಪಾಠ ಕಲಿಸುವುದು ಬಿಟ್ಟು ಈ ರೀತಿಯ ಪಾಠ ಮಾಡುವ ಅಗತ್ಯ ಇದೆಯಾ.. ನಾವು ರಾಜಕೀಯ ನಾಯಕರಾಗಿ ಅಥವಾ ಶಾಸಕರಾಗಿ ಇಲ್ಲಿ ಬಂದಿಲ್ಲ. ನಾನೊಬ್ಬ ಹಿಂದುವಾಗಿ ಬಂದಿದ್ದೇನೆ. ಶಾಲೆಯಲ್ಲಿ ಕಲಿಸಿದ ಅನುಭವವೂ ನನಗಿದೆ, ಯಾವ ಮಕ್ಕಳಿಗೂ ಅವರ ಧರ್ಮ ನೋಡಿ ಪಾಠ ಮಾಡುವ ಕ್ರಮ ಇಲ್ಲ. ನೀವು ತನಿಖೆ ಏನಿದ್ದರೂ ಆಮೇಲೆ ಮಾಡಿ, ಮೊದಲು ಆ ಶಿಕ್ಷಕಿಯನ್ನು ಅಮಾನತು ಮಾಡಿ ಎಂದು ಆಗ್ರಹ ಮಾಡಿದ್ದಾರೆ.
ಇದೇ ವೇಳೆ, ಅದೇ ಶಾಲೆಯಲ್ಲಿ ಕಲಿತು ಈಗ ಪಿಯುಸಿಯಲ್ಲಿರುವ ವಿದ್ಯಾರ್ಥಿನಿಯೊಬ್ಬಳು ತನ್ನ ಅನುಭವ ಹೇಳಿಕೊಂಡಿದ್ದು, ಸಿಸ್ಟರ್ ಪ್ರಭಾ ಸೇರಿದಂತೆ ಹಲವರು ಇದೇ ರೀತಿಯ ಧರ್ಮ ನಿಂದನೆಯ ಮಾತು ಹೇಳಿಕೊಡುತ್ತಾರೆ. ಹಿಂದಿನಿಂದಲೂ ಇದು ನಡೆದುಬಂದಿದೆ. ನಾವು ಭಯಪಟ್ಟು ಇದನ್ನೆಲ್ಲ ಹೊರಗಡೆ ಹೇಳಿಕೊಂಡಿಲ್ಲ ಎಂದರು. ಪೋಷಕರೊಬ್ಬರು ಮಾತನಾಡಿ, ಗೋಧ್ರಾ ಘಟನೆಯ ಬಗ್ಗೆ ಹೇಳಿದ್ದಾರಂತೆ. ರೇಪ್, ಹೊಟ್ಟೆ ಕತ್ತರಿಸುವುದನ್ನು ಹೇಳಿದ್ದಾರಂತೆ. ಅಯೋಧ್ಯೆ ರಾಮ ಬರೀ ಕಲ್ಲಂತೆ. ಇದನ್ನೆಲ್ಲ ಯಾಕೆ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post