ಪಣಂಬೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಪ್ರತೀ ವರ್ಷ ನಿಗದಿತ ದಿನಾಂಕಗಳನ್ನುಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಟೀಮ್ ಮಂಗಳೂರು ತಂಡದ ಆಶ್ರಯದಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ತಣ್ಣೀರುಬಾವಿ ಬೀಚ್‌ನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗಾಳಿಪಟ ಉತ್ಸವ ಇಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ದೇಶ ವಿದೇಶಗಳಿಂದ ಬಹಳಷ್ಟು ಮಂದಿ ಭಾಗವಹಿಸಿದ್ದಾರೆ. ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯವಿದ್ದು, ನಾನು ಕೂಡ ಇಷ್ಟು ವೈವಿಧ್ಯಮಯ ಗಾಳಿಪಟಗಳನ್ನು ಇಲ್ಲೇ ನೋಡಿದ್ದು ಎಂದು ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಬೋಧಿಸಿದರು.
ಈ ಬಾರಿ ಕೇರಳ, ತೆಲಂಗಾಣ, ತಮಿಳುನಾಡು ಸೇರಿದಂತೆ ನಾನಾ ರಾಜ್ಯಗಳ ಮತ್ತು ಇಂಡೋನೇಶ್ಯಾ, ಸ್ವೀಡನ್, ಯುರೋಪ್ ಸೇರಿ ನಾನಾ ದೇಶಗಳ ಗಾಳಿಪಟ ತಂಡಗಳು ಪಾಲ್ಗೊಂಡಿವೆ. ಇಟೆಲಿ ಮೂಲದವರೂ ಉತ್ಸವದಲ್ಲಿ ಪಾಲ್ಗೊಳ್ಳಲು ಬಂದಿದ್ದಾರೆ. ಒಟ್ಟು 32 ಗಾಳಿಪಟ ಹಾರಿಸುವ ಪಟುಗಳು ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಉತ್ಸವ ನೋಡಲು ಭಾರೀ ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಗರುಡನ ಮಾದರಿಯ ವಿಶೇಷ ರೀತಿಯ ಗಾಳಿಪಟ ಈ ಸಲದ ಆಕರ್ಷಣೆಗಳಲ್ಲೊಂದು. ಉಳಿದಂತೆ ಹುಲಿ, ಚಿರತೆ, ಮಿಲಿಟರಿ ಯೋಧ, ಜೀಪು, ಕಾರಿನ ಮಾದರಿಯ ಚಿತ್ರಗಳಿದ್ದು, ನಾನಾ ನಮೂನೆಯ ಪಟಗಳು ಗಾಳಿಯಲ್ಲಿ ತೇಲಾಡುತ್ತಿವೆ. ಕೇರಳ ಮತ್ತು ತೆಲಂಗಾಣದಿಂದ 22 ಕ್ಕೂ ಹೆಚ್ಚು ಭಾರತೀಯ ಗಾಳಿಪಟ ಹಾರಾಟಗಾರರು ಭಾಗವಹಿಸಿದ್ದರು.
ಮೂಲತಃ ಸ್ವೀಡನ್ ನಿವಾಸಿ, ಈಗ ಇಂಡೋನೇಶ್ಯಾದಲ್ಲಿ ನೆಲೆಸಿರುವ ಆಂಡ್ರಿ ಎಂಬವರಿದ್ದರು. ಅವರದ್ದು ಕೈಟ್ ಸ್ವೀಡನಿಂದ ಕಳಿಸಿಕೊಟ್ಟಿದ್ದು ಇಲ್ಲಿ ತಲುಪಿಲ್ಲವಂತೆ. ಹಾಗಾಗಿ ಸ್ವಲ್ಪ ನಿರಾಸೆಗೊಂಡಿದ್ದರು. ಯುರೋಪ್ ಖಂಡದ ಈಸ್ಟೋನಿಯಾ ಎಂಬ ಸಣ್ಣ ದೇಶದಿಂದ ಜಾನಾ ಎಂಬ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ಸೂಮ್ ಎಂಬ ಜೋಡಿ ಗಾಳಿಪಟದ ಜೊತೆಗೆ ಬಂದಿದ್ದರು. ಮಂಗಳೂರು ತುಂಬ ಲೈಕ್ ಆಗಿದೆ, ಇಲ್ಲಿನ ವೆದರ್ ಸೂಪರ್ ಇದೆ. ಜನರ ಆತಿಥ್ಯವೂ ಒಳ್ಳೆದಿದ್ದು, ಊಟ, ತಿಂಡಿ ಖುಷಿ ಕೊಟ್ಟಿದೆ. ಜನರು ಪ್ರೀತಿ ತೋರಿಸಿದ್ದಾರೆ ಎಂದರು. ಅವರ ಗಾಳಿಪಟ ಟೆಡ್ಡಿ ಬೇರ್ ಆಗಿತ್ತು. ಪ್ರತಿ ವರ್ಷ ಇಂಥ ಉತ್ಸವ ಆಗೋದಿದ್ದರೆ, ಪ್ರತಿ ಬಾರಿಯೂ ಇಲ್ಲಿಗೆ ಬರುತ್ತೇವೆ ಎಂದಿದ್ದಾರೆ.
Discussion about this post