ಮುಂಬೈ ಮಾ.12: ಭಾರತದಲ್ಲಿ ಇದೀಗ ಐಪಿಎಲ್ ಜ್ವರ ಶುರುವಾಗಿದೆ. ತಂಡಗಳ ಅಭ್ಯಾಸ ಆರಂಭಗೊಂಡಿದೆ. ವರ್ಣರಂಜಿತ ಟೂರ್ನಿಗೆ ಕೆಲ ದಿನಗಳು ಮಾತ್ರ ಬಾಕಿ. ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಯುವ ಕ್ರಿಕೆಟಿಗರು ಇದೀಗ ಐಪಿಎಲ್ ತಯಾರಿಯಲ್ಲಿ ಮುಳುಗಿದ್ದಾರೆ. ಇದರ ಜೊತೆಗೆ ಬಿಸಿಸಿಐ ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುತ್ತಿದೆ. ಈ ತಯಾರಿ ನಡುವೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ಆಯ್ಕೆ ಮಾಡಲು ಬಿಸಿಸಿಐ ಆಸಕ್ತಿ ತೋರಿಲ್ಲ. ಕೊಹ್ಲಿಗೆ ಕೊಕ್ ನೀಡಿ ಯುವ ಆಟಗಾರರಿಗೆ ಮಣೆ ಹಾಕಲು ಬಿಸಿಸಿಐ ನಿರ್ಧರಿಸಿದೆ. ಆದರೆ ತಂಡಕ್ಕೆ ಕೊಡುಗೆ ನೀಡಿರುವ ವಿರಾಟ್ ಕೊಹ್ಲಿ ಆಯ್ಕೆಗೆ ಕೊನೆಯ ಒಂದು ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ.ಕೊಹ್ಲಿ ಐಪಿಎಲ್ ಟೂರ್ನಿ ಪ್ರದರ್ಶನ ಆಧರಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ.
ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ವಿಫಲವಾಗಿದ್ದಾರೆ. ಕೊಹ್ಲಿ ನೈಜ ಪ್ರದರ್ಶನ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ವಿರಳವಾಗಿದೆ. ಜನವರಿ ತಿಂಗಳಲ್ಲಿ ವಿರಾಟ್ ಕೊಹ್ಲಿ ಆಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಆಡಿದ್ದರು. ಇದಾದ ಬಳಿಕ ಟೆಸ್ಟ್, ಏಕದಿನ ಹಾಗೂ ಟಿ20 ಯಾವುದರಲ್ಲೂ ಕಾಣಿಸಿಕೊಂಡಿಲ್ಲ. ಮತ್ತೊಂದೆಡೆ ಶಾರ್ಟ್ ಮಾದರಿಯಲ್ಲಿ ಕೊಹ್ಲಿ ಪ್ರದರ್ಶನ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೇರವಾಗಿ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡದಿರಲು ಬಿಸಿಐ ಮುಂದಾಗಿದೆ.
ಆಫ್ಘಾನಿಸ್ತಾನ ವಿರುದ್ಧದ ಸರಣಿ ಮೊದಲು 14 ತಿಂಗಳು ಕೊಹ್ಲಿ ಯಾವುದೇ ಟಿ20 ಪಂದ್ಯ ಆಡಿಲ್ಲ. ಬರೋಬ್ಬರಿ ಒಂದು ವರ್ಷ 2 ತಿಂಗಳ ಬಳಿಕ ಆಫ್ಘಾನಿಸ್ತಾನ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಕಳೆದೆರಡು ವರ್ಷದಲ್ಲಿ ಕೊಹ್ಲಿ ಬೆರೆಳೆಣಿಕೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದಾರೆ. ಆಡಿದ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ಮಾಡುವಲ್ಲಿ ವಿಫಲವಾಗಿದ್ದಾರೆ ಅನ್ನೋದು ಬಿಸಿಸಿಐ ಪರಾಮರ್ಶೆಯಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post