ಮಂಗಳೂರು, ಮಾರ್ಚ್ 12: ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ಗೆ ಬಿಜೆಪಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ವರದಿಗಳಾಗಿವೆ. ಆ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಸಿರುವ ಸಂಸದರು, ಭಾವುಕರಾರದರು. ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸುವುದು ನಮ್ಮ ಪಕ್ಷದ ವಿಶೇಷತೆ. ಪಕ್ಷದ ರಾಷ್ಟ್ರೀಯ ನಾಯಕರು ಎಲ್ಲಾ ಯೋಚನೆ ಮಾಡಿ ಆಯ್ಕೆ ಮಾಡುತ್ತಾರೆ. ಅವರ ಆಯ್ಕೆಯನ್ನು ಸ್ವಾಗತಿಸುತ್ತೇನೆ ಎಂದರು.
ಪಕ್ಷವು ನಿಂತ ನೀರಾಗಬಾರದು. ಹೊಸಬರು ಬರುತ್ತಾ ಇರಬೇಕು. ಚಲಾವಣೆ ಆಗುತ್ತಾ ಇರಬೇಕು. ರಾಷ್ಟ್ರೀಯ ನಾಯಕರ ತೀರ್ಮಾನಕ್ಕೆ ನಾವೆಲ್ಲಾ ಬದ್ಧರಾಗಿರುತ್ತೇವೆ.ಯಾರೇ ಅಭ್ಯರ್ಥಿ ಆದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬುದು ನಮ್ಮ ಗುರಿ. ರಾಷ್ಟ್ರೀಯ ನಾಯಕರ ಯೋಚನೆಗಳಿಗೆ ಬದ್ಧರಾಗಿ ಕೆಲಸ ಮಾಡುವವರು ನಾವು ಎಂದು ನಳಿನ್ ಹೇಳಿದರು.
ಪಕ್ಷ ಹೇಳಿದ ಕೆಲಸ ಮಾಡುತ್ತೇವೆ: ಕಟೀಲ್ – ನಾವು ಪಕ್ಷ ಏನೇ ಹೇಳಿದರೂ ಮಾಡುತ್ತೇವೆ. ಪಕ್ಷದವರು ನಮ್ಮ ಬಳಿ ಗುಡಿಸು ಎಂದರೆ ಗುಡಿಸುತ್ತೇವೆ. ಒರೆಸು ಎಂದು ಹೇಳಿದರೆ ಒರೆಸುತ್ತೇವೆ. ನಮಗೆ ಅಧಿಕಾರವೇ ಪ್ರಾಮುಖ್ಯ ಅಲ್ಲ. ಏನು ಬದಲಾವಣೆ ಮಾಡಬೇಕೋ ಅದನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಸಾಮಾಜಿಕ ಜಾಲತಾಣಗಳ ಚರ್ಚೆ ಬಗ್ಗೆ ನಾನು ಹೆಚ್ಚು ತಲೆಕಡಿಸಿಕೊಳ್ಳುವುದಿಲ್ಲ. ನಾವು ಕಾರ್ಯವನ್ನು ನಂಬಿರುವಂಥವರು. ಕಾರ್ಯಕರ್ತರ ಆಧಾರದಲ್ಲಿ ಬೆಳೆದವರು ಎಂದು ಹೇಳಿದರು.
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿರುವುದನ್ನು ರಾತ್ರಿ ನೋಡಿದೆ. ರಾಷ್ಟ್ರೀಯ ನಾಯಕರು ಯಾವ ತೀರ್ಮಾನ ತಗೊಂಡರೂ ಅದು ಪಾರ್ಟಿಯ ತೀರ್ಮಾನ. ಆ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ. ನನಗೂ ಮೂರು ಬಾರಿ ಅವಕಾಶ ನೀಡಿದ್ದಾರೆ. ಹದಿನೈದು ವರ್ಷ ಕೆಲಸ ಮಾಡಿದ್ದೇನೆ. ಪಕ್ಷ ಈ ಬಗ್ಗೆ ನಿರ್ಧಾರ ಮಾಡುತ್ತದೆ. ನಮ್ಮ ಪಾರ್ಟಿಯಲ್ಲಿ ತುಳಿಯುವ ಕೆಲಸ ಆಗಲ್ಲ. ಅದರ ಬದಲಿಗೆ ಬೆಳೆಸುವ ಕೆಲಸ ಕಾರ್ಯ ಆಗುತ್ತದೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಬಂದವನು. ಸಂಘದ ಕಾರ್ಯಕ್ಕೋಸ್ಕರ ಬಂದಿದ್ದು. ಬಿಜೆಪಿ ಕೆಲಸ ಮಾಡು ಎಂದಾಗ ಮಾಡಿದೆ. ಲೋಕಸಭೆ ಚುನಾವಣೆಗೆ ನಿಲ್ಲು ಎಂದರು, ಸ್ಪರ್ಧಿಸಿದೆ. ಆ ಬಳಿಕ ರಾಜ್ಯಾಧ್ಯಕ್ಷನೂ ಆದೆ. ಯಾವ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ರಾಜ್ಯಾಧ್ಯಕ್ಷ ಆಗುತ್ತಾರೆ ಎಂದು ನಳಿನ್ ಪ್ರಶ್ನಿಸಿದರು.
ಬಿಜೆಪಿಯಲ್ಲಿ ಯಾರನ್ನೂ ತುಳಿಯುವುದಿಲ್ಲ. ಅವಕಾಶ ಸಿಕ್ಕಾಗ ನನಗೆ ನ್ಯಾಯ ಸಿಕ್ಕಿದೆ. ಅವಕಾಶ ಸಿಕ್ಕಿಲ್ಲ ಅಂದಾಗ ಅನ್ಯಾಯ ಆಗಿದೆ ಎಂದು ಹೇಳುವ ಹಕ್ಕು ನಮಗಿಲ್ಲ. ಎಲ್ಲರನ್ನೂ ಪಾರ್ಟಿ ಬೆಳೆಸಿದೆ. ಟಿಕೆಟ್ ಸಿಕ್ಕಿಲ್ಲ ಎಂದ ಕೂಡಲೇ ಅಂಥವರನ್ನು ಕೈಬಿಟ್ಟಿದೆ ಎಂದು ಅರ್ಥ ಅಲ್ಲ. ಮುಂದಕ್ಕೆ ಬಹಳಷ್ಟು ಅವಕಾಶ ಸಿಗಬಹುದು. ಪಕ್ಷದ ಕೆಲಸ ಮಾಡೋದಕ್ಕೂ ಜನ ಬೇಕಲ್ಲ. ಈ ಬಗ್ಗೆ ಯೋಚನೆ ಮಾಡಿಕೊಂಡೇ ರಾಷ್ಟ್ರೀಯ ನಾಯಕರು ಪಟ್ಟಿ ಘೋಷಣೆ ಮಾಡುತ್ತಾರೆ. ನಾವು ಸಂಘಟನೆ ಕಾರ್ಯ ಮಾಡುವವರು, ಹೀಗಾಗಿ ಯಾವುದೇ ಅಸಮಾಧಾನ ಇಲ್ಲ ಎಂದು ಕಟೀಲ್ ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post