ಮಂಗಳೂರು, ಮಾ.13: ಭಾರತೀಯ ಭೂ ಸೇನೆಯ ನಿವೃತ್ತ ಅಧಿಕಾರಿ, ರಾಜ್ಯ ಬಿಜೆಪಿ ಕಾರ್ಯದರ್ಶಿ ಬ್ರಿಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ. ಇದರೊಂದಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯ ಟಿಕೆಟ್ ಬಗ್ಗೆ ಕೆಲವು ದಿನದಿಂದ ಇದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿವೆ. ಈ ಮಧ್ಯೆ ಬ್ರಿಜೇಶ್ ಚೌಟರ ಆಯ್ಕೆಯು ಬಿಜೆಪಿ ವಲಯದಲ್ಲೇ ಅಚ್ಚರಿ ವ್ಯಕ್ತವಾಗಿವೆ.
ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ರಾಜ್ಯ, ದೇಶದ ಎಲ್ಲ ನಾಯಕರನ್ನು ಉಲ್ಲೇಖಿಸಿ ಅಭಿನಂದನೆ ಹೇಳಿದ ಬೃಜೇಶ್ ಚೌಟ, ಈ ಮಣ್ಣಿಗೆ, ದೈವ ದೇವರ ತುಳುನಾಡಿಗೆ ವಿಶೇಷ ಶಕ್ತಿಯಿದೆ. ದಕ್ಷಿಣ ಕನ್ನಡ ಎಂಬ ಅದ್ಭುತ ನೆಲದಲ್ಲಿ ಬಿಜೆಪಿ ಟಿಕೆಟ್ ಕೊಟ್ಟಿರುವುದಕ್ಕೆ ಋಣಿಯಾಗಿದ್ದೇನೆ. ಅಸಂಖ್ಯಾತ ದೇವ ದುರ್ಲಭ ಕಾರ್ಯಕರ್ತರಿಗೆ ಋಣಿಯಾಗಿದ್ದೇನೆ ಎಂದರು.
ಬ್ರಿಜೇಶ್ ಚೌಟ ತನ್ನ ಕಾಲೇಜು ದಿನಗಳಲ್ಲಿ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)ನಲ್ಲಿ ನಾಯಕತ್ವಕ್ಕಾಗಿ ಹೆಸರುವಾಸಿಯಾಗಿದ್ದರು. ಅವರು ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಮಿಲಾಗ್ರಿಸ್ ಶಾಲೆಯಲ್ಲಿ ಪಡೆದರು. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಶಿಕ್ಷಣ ಪೂರ್ಣಗೊಳಿಸಿದ್ದರು. ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ ವ್ಯಾಸಂಗ ಮಾಡಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದ ಎನ್‌ಸಿಸಿಯಲ್ಲಿ ಅತ್ಯುತ್ತಮ ಕೆಡೆಟ್ ಆಗಿ ಗುರುತಿಸಿಕೊಂಡಿದ್ದು, ದಿಲ್ಲಿಯ ಗಣರಾಜ್ಯ ಪರೇಡ್‌ನಲ್ಲಿ ಭಾಗವಹಿಸಿದ್ದರು. ಪದವಿಯ ಬಳಿಕ ಬ್ರಿಜೇಶ್ ಚೌಟ ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ ಎಕ್ಸಾಮಿನೇಷನ್ (ಸಿಡಿಸಿ) ಉತ್ತೀರ್ಣರಾದರು. ಬಳಿಕ ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಲ್ಲಿ (ಒಟಿಎ) ತರಬೇತಿ ಪಡೆದರು. ಪ್ರತಿಷ್ಠಿತ 8 ಗೂರ್ಖಾ ರೈಫಲ್ಸ್‌ನ 7ನೇ ಬೆಟಾಲಿಯನ್‌ನಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅಸ್ಸಾಂ ಮತ್ತು ಮಣಿಪುರ ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ.
ಸ್ವಯಂ ನಿವೃತ್ತಿಯ ನಂತರ 2011ರಲ್ಲಿ ತನ್ನ ಸ್ವಗ್ರಾಮಕ್ಕೆ ಹಿಂದಿರುಗಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದರು. 2013ರಲ್ಲಿ ಬಿಜೆಪಿ ಯುವ ಮೋರ್ಚಾದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, 2016ರಿಂದ 2019ರವರೆಗೆ ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಪ್ರಭಾರಿಯಾಗಿ ಕೆಲಸ ಮಾಡಿದ್ದರು.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು 2015ರಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳದ ನಿಷೇಧದ ವಿರುದ್ಧದ ಪ್ರತಿಭಟನೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಗಳೂರು ಕಂಬಳವನ್ನು ಹಲವು ವರ್ಷಗಳಿಂದ ಆಯೋಜಿಸಿ ಗಮನ ಸೆಳೆದಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post