ಮಂಗಳೂರು, ಜು. 12 : ಸುರತ್ಕಲ್ ಸಮೀಪದ ಮುಕ್ಕದಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನದ ಬೆನ್ನಲ್ಲೇ, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬಂಧಿತರು ಪ್ರಸ್ತುತ ಮುಕ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಬಂಧನ ಕೇಂದ್ರದಲ್ಲಿ ವಿಚಾರಣೆ ಎದುರಿಸುತ್ತಿದ್ದು, ಕಾನೂನು ಪ್ರಕ್ರಿಯೆ ಬಳಿಕ ಬಂಧಿತರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಬಂಧಿತರನ್ನು ಮುಹಮ್ಮದ್ ಮುಖ್ತಾರ್ ಅಲಿ ( 36), ಮುಹಮ್ಮದ್ ರಾಕಿಬುರ್ ಹುಸೈನ್ (44), ಮುಹಮ್ಮದ್ ಅಝರುಲ್ ಇಸ್ಲಾಂ ( 36), ಮುಹಮ್ಮದ್ ಝೈದ್ ಹುಸನ್ (18), ಮುಹಮ್ಮದ್ ಬಿಲಾಲ್ ಹುಸೈನ್ (36), ಮುಹಮ್ಮದ್ ಹಾಸಿಬುಲ್ ಹಸನ್ ಶನ್ಟೊ ( 37), ಮುಹಮ್ಮದ್ ಸಮೀವುಲ್ ಹಸನ್ ( 23), ಮುಹಮ್ಮದ್ ಸೈಬುರ್ರಹ್ಮಾನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇವರೆಲ್ಲರೂ ಮೂರು ತಿಂಗಳ ಹಿಂದೆ ಅಕ್ರಮವಾಗಿ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲಕ ಭಾರತಕ್ಕೆ ಬಂದು ನಂತರ ಅಲ್ಲಿನ ವಿಳಾದಲ್ಲಿದ್ದವರ ಆಧಾರ್ ಕಾರ್ಡ್‌ಗಳಿಗೆ ಅವರ ಭಾವಚಿತ್ರ ಅಂಟಿಸಿ ಕಲರ್ ಜೆರಾಕ್ಸ್ ಪಡೆದುಕೊಂಡು ಎರಡು ತಿಂಗಳಿನಿಂದ ಮುಕ್ಕದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.

ಮುಕ್ಕದ ನಿರ್ಮಾಣ ಹಂತದ ಕಡ್ಡಡಗಳ ಕಾಮಗಾರಿಯಲ್ಲಿ ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ವಾಸಿಸುತ್ತಿ ರುವ ಕುರಿತು ಸುರತ್ಕಲ್ ಪೊಲೀಸ್ ಉಪ ನಿರೀಕ್ಷಕ ರಘು ನಾಯ್ಕ್ ಅವರಿಗೆ ಖಚಿತ ಮಾಹಿತಿ ಬಂದಾಕ್ಷಣ ತಂಡ ದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಎರಡು ನಿರ್ಮಾಣ ಹಂತದ ಕಟ್ಟಡಗಳ ಬಳಿ ಜೋಪಡಿ ಹಾಕಿ ವಾಸವಿದ್ದ ಸುಮಾರು 54 ಮಂದಿಯನ್ನು ಪರಿಶೀಲನೆ ಒಳಪಡಿಸಿದ್ದರು. ಈ ಪೈಕಿ 8ಮಂದಿಗೆ ಸೇರಿದ ಬಾಂಗ್ಲಾದೇಶದ ಗುರುತಿನ ಚೀಚಿಗಳು ಪತ್ತೆಯಾಗಿತ್ತು. ಪೊಲೀಸರು ಆರೋಪಿಗಳ ಆಧಾರ್ ಕಾರ್ಡ್‌ಗಳನ್ನು ಬಯೋಮೆಟ್ರಿಕ್ ಹೆಬ್ಬೆರಳಿನ ಗುರುತಿನ ಮೂಲಕ ಪರಿಶೀಲಿಸಿದಾಗ, ಅವು ನಕಲಿ ಎಂಬುದು ದೃಢಪಟ್ಟಿದೆ. ಆರೋಪಿಗಳು ಪಶ್ಚಿಮ ಬಂಗಾಳದ ವ್ಯಕ್ತಿಗಳ ಅಸಲಿ ಆಧಾರ್ ಕಾರ್ಡ್‌ಗಳ ಬಣ್ಣದ ಫೋಟೋಕಾಪಿಗಳನ್ನು ಪಡೆದು, ಅದರ ಮೇಲೆ ತಮ್ಮ ಫೋಟೋಗಳನ್ನು ಅಂಟಿಸಿ ಲ್ಯಾಮಿನೇಟ್ ಮಾಡಿಸಿದ್ದರು. ಡಿಜಿಟಲ್ ಪರಿಶೀಲನೆಯ ವೇಳೆ, ದತ್ತಾಂಶದಲ್ಲಿರುವ ಫೋಟೋಗಳು ಭೌತಿಕ ಕಾರ್ಡ್‌ಗಳಲ್ಲಿರುವ ಫೋಟೋಗಳಿಗೆ ಹೊಂದಿಕೆಯಾಗಿರಲಿಲ್ಲ. ಅವರ ಅರ್ಧಬರ್ದ ಹಿಂದಿ ಮತ್ತು ವಿಭಿನ್ನ ಬಂಗಾಳಿ ಶೈಲಿಯ ಮಾತುಕತೆಯಿಂದ ಅವರು ಬಾಂಗ್ಲಾದೇಶದವರು ಎಂಬುದು ಬೆಳಕಿಗೆ ಬಂದಿದೆ. ಬಳಿಕ ಎಲ್ಲಾ ಎಂಟು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಹಿರಿಯ ಅಧಿಕಾರಿಗಳ ಮೂಲಕ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಅವರ ಸೂಚನೆಯ ಮೇರೆಗೆ ಎಲ್ಲರನ್ನೂ ಬಂಧಿಸಿ ಪೊಲೀಸ್ ಠಾಣೆಯಲ್ಲಿಡಲಾಗಿತ್ತು. ಬಳಿಕ ಎಲ್ಲರನ್ನೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಸುಪರ್ದಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

Discover more from Coastal Times Kannada
Subscribe to get the latest posts sent to your email.








Discussion about this post