ಮಂಗಳೂರು, ಸೆ.12: ನಗರದ ಪಾಂಡೇಶ್ವರ ಬಳಿಯ ಹೊಯ್ಗೆಬಜಾರ್ ಸಮುದ್ರ ತೀರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮೀನುಗಾರರು ಬೋಟಿನಲ್ಲಿ ತೆರಳುತ್ತಿದ್ದಾಗ ಶವ ಪತ್ತೆಯಾಗಿದೆ.
ಮೀನುಗಾರಿಕಾ ದಕ್ಕೆಗೆ ತೆರಳುತ್ತಿದ್ದ ಸ್ಥಳೀಯ ಮೀನುಗಾರರು ತೇಲುತ್ತಿದ್ದ ಯುವತಿಯ ಮೃತದೇಹ ನೋಡಿದ್ದಾರೆ. ಉಳ್ಳಾಲ ಉಳಿಯದ ಪ್ರೇಮಪ್ರಕಾಶ್ ಹಾಗೂ ಅನಿಲ್ ಮೊಂತೇರೋ ಮೀನುಗಾರಿಕೆ ಮುಗಿಸಿ ಮೀನನ್ನು ಧಕ್ಕೆಗೆ ಪೂರೈಸಲು ತೆರಳುತ್ತಿದ್ದಾಗ ಶವ ಕಂಡಿದ್ದು ಎಳೆದು ದಡಕ್ಕೆ ಹಾಕಿದ್ದಾರೆ. ಅಲ್ಲದೆ, ಪಾಂಡೇಶ್ವರ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ವೆನ್ಲಾಕ್ ಶವಾಗಾರಕ್ಕೆ ತಂದಿದ್ದಾರೆ. ಸ್ಥಳೀಯರು ಮತ್ತು ಪೊಲೀಸರ ಪ್ರಕಾರ, ಶವ ಮಂಗಳಮುಖಿಯದ್ದು ಎನ್ನುವ ಮಾಹಿತಿಯಿದೆ. 5 ಅಡಿ ಎತ್ತರ, ಕಪ್ಪು ಬಣ್ಣದ ಟೀಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಒಂದು ಕೈಯಲ್ಲಿ ಕೆಂಪು ದಾರ ಮತ್ತು ಕಪ್ಪು ಬಳೆ ಹಾಕಿಕೊಂಡಿದ್ದು, ಉದ್ದ ಕೂಡಲು ಹೊಂದಿದ್ದಾರೆ. ಮೃತದೇಹದ ಮೇಲೆ ಯಾವುದೇ ಗಾಯಗೊಂಡ ಕಲೆಗಳು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.