ಮಂಗಳೂರು: ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಯುನಿಪೋರ್ಟಲ್ ವ್ಯಾಟ್ಸ್ (ವಿಡಿಯೊ ಅಸಿಸ್ಟೆಡ್ ಥೊರಾಸಿಕ್ ಸರ್ಜರಿ) ಯಶಸ್ವಿಯಾಗಿ ಮಾಡಲಾಗಿದೆ ಎಂದು ನಗರದ ಇಂಡಿಯಾನಾ ಆಸ್ಪತ್ರೆಯ ಡಾ.ಅಪೂರ್ವ ಜಯದೇವ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಘನ ಅಂಗಗಳಲ್ಲಿ (ಸಾಲಿಡ್ ಆರ್ಗಾನ್) ಕಾಣಿಸಿಕೊಳ್ಳುವ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಮೀಪದ ದುಗ್ದರಸ ಗ್ರಂಥಿಗಳಂಥ ಕ್ಯಾನ್ಸರ್ ಕಾರಕ ಅಂಗಾಂಶಗಳನ್ನು ತೆಗೆದು ಹಾಕಲು ಶಸ್ತ್ರಚಿಕಿತ್ಸೆ ಅಗತ್ಯವಿರುತ್ತದೆ. ಈ ಚಿಕಿತ್ಸೆಯಲ್ಲಿ ವ್ಯಾಟ್ಸ್ ಈಗ ಸಾಮಾನ್ಯವಾಗಿದೆ. ಆದರೆ ಮಂಗಳೂರಿಗೆ ಇದು ಅಪರೂಪ ಎಂದರು. ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಕಾರ್ಸಿನೋಮಾ ಲಿರಿಂಕ್ಸ್ (ಧ್ವನಿಪೆಟ್ಟಿಗೆಯನ್ನು ಭಾದಿಸುವ ಕ್ಯಾನ್ಸರ್) ಸಮಸ್ಯೆಗೆ ಒಳಗಾಗಿದ್ದರು. ಆ ವ್ಯಕ್ತಿಯ ಎದೆಯಲ್ಲಿ ತೆರೆದ ಶಸ್ತ್ರಚಿಕಿತ್ಸೆ ಮಾಡಬೇಕಾದರೆ 20 ಸೆಂಟಿಮೀಟರ್ ಉದ್ದದಲ್ಲಿ ಛೇದಿಸಬೇಕಾಗಿತ್ತು. 63 ವರ್ಷದ ಅವರಿಗೆ ಈ ಚಿಕಿತ್ಸೆ ಅಪಾಯಕಾರಿಯಾಗಿತ್ತು. ಆದ್ದರಿಂದ ವ್ಯಾಟ್ಸ್ ಮಾಡಲಾಯಿತು ಎಂದು ಅವರು ತಿಳಿಸಿದರು. ಈ ಚಿಕಿತ್ಸೆ ನಂತರ ಔಷಧಿ ಸೇವನೆ ಪ್ರಮಾಣ ಕಡಿಮೆ ಇರುತ್ತದೆ. ರೋಗಿ ಬೇಗನೇ ಸಹಜ ಜೀವನ ನಡೆಸಲು ಸಾಧ್ಯವಾಗುತ್ತದೆ. ಇದು ಏಕ ಕೀ ಹೋಲ್ ಶಸ್ತ್ರಚಿಕಿತ್ಸೆಯಾಗಿದ್ದು ತಾಂತ್ರಿಕವಾಗಿ ಸವಾಲಿನದ್ದಾಗಿದ್ದರೂ ರೋಗಿಯ ಹಿತದೃಷ್ಟಿಯಿಂದ ಪರಿಣಾಮಕಾರಿ ಎಂದು ಅಪೂರ್ವ ವಿವರಿಸಿದರು.