ಮಹಾನಗರ: ಮಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶವನ್ನು “ಸುರಕ್ಷಿತ ವಲಯ’ವನ್ನಾಗಿ ಮಾಡಲು ಮಂಗಳೂರು ಪೊಲೀಸರು ಹೆಜ್ಜೆ ಇಟ್ಟಿದ್ದು ಸ್ಫೋಟಕ ಸಾಮಗ್ರಿಗಳ ದಾಸ್ತಾನಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದಾರೆ.
ನಗರ ವೇಗವಾಗಿ ಬೆಳೆಯುತ್ತಿರುವು ದರಿಂದ ಇಲ್ಲಿ ಸೂಕ್ತ ಅಂತರ ಕಾಪಾಡುವುದು ಸೇರಿದಂತೆ ಅಗ್ನಿಶಾಮಕ ಇಲಾಖೆಯ ನಿಯಮಗಳನ್ನು ಪಾಲಿಸುವುದು ಕಷ್ಟಸಾಧ್ಯ. ಮಾತ್ರವಲ್ಲದೆ ಮಂಗ ಳೂರು ವಿವಿಧ ರೀತಿಯಲ್ಲಿ ಸೂಕ್ಷ್ಮ ನಗರವಾಗಿದೆ. ಹಾಗಾಗಿ ಸ್ಫೋಟಕ ಸಾಮಗ್ರಿಗಳ ದಾಸ್ತಾನುಗಳ ಸಂಗ್ರಹಕ್ಕೆ ಅವಕಾಶ ನೀಡದಿರಲು ಅಗ್ನಿ ಶಾಮಕ ಇಲಾಖಾಧಿಕಾರಿಗಳು ಮತ್ತು ಪೊಲೀಸರು ನಿರ್ಧರಿಸಿದ್ದಾರೆ.
11 ಮಂದಿಗೆ ನೋಟಿಸ್ : ಮಂಗಳೂರು ನಗರ ಸಹಿತ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 11 ಸ್ಫೋಟಕ ಸಾಮಗ್ರಿಗಳ ದಾಸ್ತಾನು ಕೇಂದ್ರ ಮಳಿಗೆಗಳಿಗೆ ನೋಟಿಸ್ ನೀಡಿ ತೆರವುಗೊ ಳಿಸಲು ಸೂಚಿಸಲಾಗಿದೆ. ಈ ಪೈಕಿ ನಗರದ ಬಹುತೇಕ ಮಂದಿ ಸ್ಫೋಟ ಸಾಮಗ್ರಿ ದಾಸ್ತಾನು ಮಾರಾಟ ವ್ಯಾಪಾರಸ್ಥರು ತೆರವುಗೊಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳೂರು ಪೊಲೀಸರು ಇದೇ ಮೊದಲ ಬಾರಿಗೆ ಎಂಬಂತೆ ಕಳೆದೆರಡು ತಿಂಗಳುಗಳಲ್ಲಿ ಮೂರು ಕಡೆಗಳಲ್ಲಿ ದಾಳಿ ನಡೆಸಿ 1,600 ಕೆ.ಜಿ.ಗೂ ಅಧಿಕ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ ಪೊಟ್ಯಾಶಿಯ ನೈಟ್ರೇಟ್, ಬೇರಿಯಂ ನೈಟ್ರೇಟ್, ಅಲ್ಯುಮೀನಿಯಂ ಪೌಡರ್, ಗನ್ ಪೌಡರ್, ಗಂಧಕದ ಪೌಡರ್ ಮೊದಲಾದವು ಸೇರಿವೆ.
ಪಟಾಕಿ ತಯಾರಿಕೆಗೆ, ಪ್ರಾಣಿಗಳ ಬೇಟೆ, ಮೀನುಗಳನ್ನು ಹಿಡಿಯಲು ತೋಟೆಯಂತಹ ಸ್ಫೋಟಕಗಳ ತಯಾರಿಕೆ, ಕಲ್ಲುಕೋರೆಗೆ ಬಳಕೆ ಮೊದಲಾದ ಉದ್ದೇಶಗಳಿಂದ ಮಂಗಳೂರು ನಗರವನ್ನು ಕೇಂದ್ರೀಕರಿಸಿ ಸ್ಫೋಟಕ ಸಾಮಗ್ರಿಗಳ ದಾಸ್ತಾನು, ಮಾರಾಟ ಭಾರೀ ಪ್ರಮಾಣದಲ್ಲಿ ನಡೆಯುತ್ತಿತ್ತು. ನಗರದ ಹೊರವಲಯದಲ್ಲಿಯೂ ಹಲವಾರು ವರ್ಷಗಳಿಂದ ಸ್ಫೋಟಕ ಸಾಮಗ್ರಿಗಳ ವ್ಯಾಪಾರ ನಡೆದುಕೊಂಡು ಬಂದಿತ್ತು.
ಪರವಾನಿಗೆ ನವೀಕರಣ ಇಲ್ಲ : ಮಂಗಳೂರಿನಲ್ಲಿರುವ ಸ್ಫೋಟಕ ಸಾಮಗ್ರಿಗಳ ಮಳಿಗೆಗಳ ಪೈಕಿ ಹೆಚ್ಚಿನವು ವಾಣಿಜ್ಯ ಕಟ್ಟಡದಲ್ಲಿ, ಇನ್ನು ಕೆಲವು ಜನವಸತಿ ಪ್ರದೇಶದಲ್ಲಿ ಇದ್ದುದರಿಂದ ಸುರಕ್ಷೆ ದೃಷ್ಟಿಯಿಂದ ಅಗ್ನಿಶಾಮಕ ದಳದವರು ಎನ್‌ಒಸಿ (ನಿರಾಕ್ಷೇಪಣ ಪತ್ರ) ನೀಡುತ್ತಿಲ್ಲ. ಹಾಗಾಗಿ ಅವರಿಗೆ ಪರವಾನಿಗೆ ಸಿಗುತ್ತಿಲ್ಲ. ಕೆಲವರು ಈ ಹಿಂದೆ ತಾತ್ಕಾಲಿಕ ಪರವಾನಿಗೆ ಪಡೆದುಕೊಂಡಿದ್ದರು. ಅವರಿಗೆ ನೋಟಿಸ್ ನೀಡಿದ್ದೇವೆ. ಪರವಾನಿಗೆ ಹೊಂದಿಲ್ಲದವರ ವಿರುದ್ಧ ಸ್ಫೋಟಕ ಸಾಮಗ್ರಿ ಕಾಯಿದೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಪಟಾಕಿ ಮಾರಾಟ ಮಾಡುವವರಿಗೆ ತೆರೆದ ಸ್ಥಳದಲ್ಲಿ ಸೀಮಿತ ಅವಧಿಗೆ ಮಾತ್ರ ಪರವಾನಿಗೆ ನೀಡಲಾಗುತ್ತದೆ ಎಂದು ಮಂಗಳೂರು ಪೊಲೀಸ್ ಆಯುಕ್ತರು -ಎನ್. ಶಶಿಕುಮಾರ್ ನಿರ್ಧರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post