ಮಂಗಳೂರು: ಎಲ್ಲಾ ಶಾಲೆ ಕಾಲೇಜುಗಳ 100 ಮೀಟರ್ ವ್ಯಾಪ್ತಿಯನ್ನು ತಂಬಾಕು ಮುಕ್ತ ಪ್ರದೇಶವೆಂದು ಘೋಷಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಬುಧವಾರ ನಗರದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಎಂದರು.
ಸರಕಾರಿ ಕಚೇರಿಗಳಲ್ಲಿಯೂ ತಂಬಾಕು ಉಪಯೋಗ ಅಥವಾ ಸೇವನೆಗೆ ಅವಕಾಶವಿಲ್ಲ, ಇದಕ್ಕೆ ಸಂಬಂಧಸಿದಂತೆ ಆಯಾ ಕಚೇರಿ ಮುಖ್ಯಸ್ಥರು ತಮ್ಮ ಕಚೇರಿ ಅಥವಾ ಕಟ್ಟಡಗಳಲ್ಲಿ ತಂಬಾಕು ಮುಕ್ತ ಎಂಬ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತೀ ಗ್ರಾ.ಪಂ. ಅಡಿಯಲ್ಲಿ ಒಂದು ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ (ಆಡಳಿತ) ಅವರಿಗೆ ಸೂಚಿಸಲಾಗುವುದು ಮತ್ತು ಆಯಾ ಗ್ರಾಮ ಪಂಚಾಯತ್‌ನ ಪಿಡಿಒ ಪ್ರತೀ ತಿಂಗಳು ಕೋಟಾ³ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ಡಾ| ಹನುಮಂತರಾಯಪ್ಪ, ಡಿಎಚ್‌ಒ ಡಾ| ಕಿಶೋರ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಜಗದೀಶ್ ಮೊದಲಾದವರು ಸಭೆಯಲ್ಲಿದ್ದರು.