ಉಡುಪಿ: ಜ 13: ಜಮೀನಿನ ಕನ್ವರ್ಷನ್ ಮಾಡಲು ಲಕ್ಷಾಂತರ ರೂಪಾಯಿ ಲಂಚ ಕೇಳಿದ ಆರೋಪದಡಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಮತ್ತು ಅಧಿಕಾರಿಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಗುರುಪ್ರಸಾದ್, ಪ್ರಾಧಿಕಾರದ ಅಧಿಕಾರಿಗಳಾದ ನಯಿಮಾ ಸಯೀದ್ ಮತ್ತು ಪ್ರಸಾದ್ ಬಂಧಿತ ಆರೋಪಿಗಳು.

ವ್ಯಕ್ತಿಯೊರ್ವರು ಉಡುಪಿ ನಗರಾಭಿವೃದ್ದಿ ಪ್ರಾದಿಕಾರದ ವ್ಯಾಪ್ತಿಯಲ್ಲಿ ಬರುವ ತನ್ನ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದರು. ಆ ಕೆಲಸ ಮಾಡಿಕೊಳ್ಳಲು ಆರೋಪಿಗಳು ವ್ಯಕ್ತಿಯ ಬಳಿ ರೂ 2. 50 ಲಕ್ಷ ರೂಪಾಯಿ ಲಂಚ ಕೇಳಿದ್ದರೆಂದು ಆರೋಪಿಸಲಾಗಿದೆ.
ಈ ಹಿನ್ನಲೆಯಲ್ಲಿ ಕನ್ವರ್ಷನ್ ಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯು ಎಸಿಬಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಹೀಗಾಗಿ ಇಂದು ಲಂಚ ನೀಡಲು ಮುಹೂರ್ತ ಫಿಕ್ಸ್ ಅಗಿತ್ತು. ಇದೇ ಘಳಿಗೆಗೆ ಹೊಂಚು ಹಾಕಿ ಕಾಯುತ್ತಿದ್ದ ಎಸಿಬಿ ಅಧಿಕಾರಿಗಳು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಹಾಗೂ ಲಂಚ ಪಡೆಯುತ್ತಿದ್ದ ಅಧಿಕಾರಿಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.


ಈ ಆರೋಪಿಗಳ ಮೇಲೆ ಹಿಂದೆ ಕೂಡ ಸಾಕಷ್ಟು ಮಂದಿ ದೂರು ದಾಖಲಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳು ಲಂಚ ಕೊಟ್ಟರೂ ಕೆಲಸ ಮಾಡಿಕೊಡುವುದಿಲ್ಲ ಎಂದು ಹೇಳಲಾಗಿತ್ತು. ಅವರಿಗಾಗಿ ಸೂಕ್ತ ಸಮಯಕ್ಕೆ ಪೊಲೀಸರು ಕಾದು ಕುಳಿತಿದ್ದರು. ಇದೀಗ ಎರಡೂವರೆ ಲಕ್ಷ ರೂಪಾಯಿ ಲಂಚ ಕೇಳುವಾಗ ಮೊದಲೇ ಪ್ಲ್ಯಾನ್ ಮಾಡಿದಂತೆ ಬಲೆ ಬೀಸಿ ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ನಗರದ ಆದಿ ಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸ್‍ಪಿ ಸೈಮನ್, ಡಿವೈಎಸ್‍ಪಿ ಮಂಜುನಾಥ್ ಕವರಿ ನೇತೃತ್ವದಲ್ಲಿ ಎಸಿಬಿ ಎಸ್‍ಐ ಸತೀಶ್, ರಫೀಕ್ ಎಂ. ದಾಳಿ ನಡೆಸಿದ್ದಾರೆ.