ಮಂಗಳೂರು, ಜ.13: ನಗರದ ರೋಶನಿ ನಿಲಯ ಸಭಾಂಗಣದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗೆ ಕೋವಿಡ್ ವಿರುದ್ಧದ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಜತೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಲಸಿಕೆ ಪಡೆದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಕೋವಿಡ್ ವೈರಸ್‌ನಿಂದಾಗುವ ಅಪಾಯಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೀಡಲಾಗುವ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದು 9 ತಿಂಗಳ ಬಳಿಕ ಬೂಸ್ಟರ್ ಡೋಸ್ ಪಡೆಯಬಹುದು. ಈಗಾಗಲೇ ಮುಂಚೂಣಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಆರೋಗ್ಯ, ಪೊಲೀಸ್ ಸಿಬ್ಬಂದಿಗೆ ಈ ಬೂಸ್ಟರ್ ಡೋಸ್ ನೀಡುವ ಕಾರ್ಯ ಆರಂಭಗೊಂಡಿದೆ ಎಂದು ಹೇಳಿದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, 3ನೆ ಅಲೆಯ ಹೊಸ್ತಿಲ್ಲಲಿರುವ ಈ ಸಂದರ್ಭದಲ್ಲಿ ಮೆ ಮರೆಯದೆ ಸಾರ್ವಜನಿಕರು ಸಂಯಮವನ್ನು ಕಾಪಾಡಿಕೊಂಡು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸುವುದು ಅಗತ್ಯವಾಗಿದೆ ಎಂದರು.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುವ 750ರಷ್ಟು ಅಧಿಕಾರಿ ಸಿಬ್ಬಂದಿಯಲ್ಲಿ ಈಗಾಗಲೇ 550ರಷ್ಟು ಮಂದಿ ಡೋಸ್ ಪಡೆದಿದ್ದು, ಇಂದು ಬಾಕಿ ಉಳಿದ ಅರ್ಹರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಬೂಸ್ಟರ್ ಡೋಸ್‌ನಿಂದ ತೊಂದರೆ ಆಗುತ್ತದೆ ಎಂಬ ಅನುಮಾನಗಳಿಂದ ಹೊರಬಂದು ಅರ್ಹರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಅವರು ಈ ಸಂದರ್ಭ ಕರೆ ನೀಡಿದರು.
ವೇದಿಕೆಯಲ್ಲಿ ಡಿಸಿಪಿ ಹರಿರಾಂ ಶಂಕರ್, ರೋಶನಿ ನಿಲಯ ಕಾಲೇಜಿನ ಪ್ರಾಂಶುಪಾಲೆ ಜೂಲಿಯೆಟ್, ಮನಪಾ ಕೋವಿಡ್ ನೋಡಲ್ ಅಧಿಕಾರಿ ಡಾ. ಅಣ್ಣಯ್ಯ ಕುಲಾಲ್ ಉಪಸ್ಥಿತರಿದ್ದರು.