ಬೆಂಗಳೂರು: 24 ವರ್ಷದ ಯುವತಿ ಮೇಲೆ ಆ್ಯಸಿಡ್ ಎರಚಿದ್ದ ನಾಗೇಶ್, ತಮಿಳುನಾಡಿಗೆ ಹೋಗಿ ‘ರಮಣ’ ಆಶ್ರಮದಲ್ಲಿ ಸ್ವಾಮೀಜಿ ಆಗಿ ವೇಷ ಬದಲಿಸಿಕೊಂಡಿದ್ದ. ಭಕ್ತರ ವೇಷದಲ್ಲಿ ಆಶ್ರಮಕ್ಕೆ ಹೋಗಿದ್ದ ಪೊಲೀಸರು, ನಾಗೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಏಪ್ರಿಲ್ 28ರಂದು ಕೃತ್ಯ ಎಸಗಿ ಪರಾರಿಯಾಗಿದ್ದ ನಾಗೇಶ್, ತಮಿಳುನಾಡಿನ ಹಲವು ಊರುಗಳಲ್ಲಿ ಸುತ್ತಾಡಿದ್ದ. ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂಬುದನ್ನು ತಿಳಿದಿದ್ದ ನಾಗೇಶ್, ಆಶ್ರಮವೊಂದಕ್ಕೆ ಸೇರಿದ್ದ. ಸ್ವಾಮೀಜಿ ಆಗಿ ಬದಲಾಗಿದ್ದ ನಾಗೇಶ್‌ಗೆ ಭಕ್ತರ ಸಂಖ್ಯೆಯೂ ಹೆಚ್ಚಿತ್ತು. ಪಶ್ಚಿಮ ವಿಭಾಗದ ಪೊಲೀಸರಿಗೆ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿತ್ತು. ‘ಆಶ್ರಮಕ್ಕೆ ನೇರವಾಗಿ ಹೋಗಿ ಸ್ವಾಮೀಜಿಯನ್ನು ಬಂಧಿಸಿದರೆ ಭಕ್ತರು ತರಾಟೆಗೆ ತೆಗೆದುಕೊಳ್ಳುತ್ತಾರೆ’ ಎಂಬುದನ್ನು ತಿಳಿದಿದ್ದ ಪೊಲೀಸರು, ಆರಂಭದಲ್ಲಿ ಭಕ್ತರ ವೇಷದಲ್ಲೇ ಆಶ್ರಮಕ್ಕೆ ಪ್ರವೇಶಿಸಿದ್ದರು. ಕೆಲದಿನ ನಾಗೇಶ್ ವರ್ತನೆ ಹಾಗೂ ಆತನ ಹಿನ್ನೆಲೆ ಬಗ್ಗೆ ತಿಳಿದುಕೊಂಡಿದ್ದರು. ನಾಗೇಶ್ ಎಂಬುದು ಖಾತ್ರಿಯಾಗುತ್ತಿದ್ದಂತೆ ತಮಿಳುನಾಡು ಪೊಲೀಸರ ಸಹಾಯದಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ.
ಸ್ವಾಮಿಜಿ ವೇಶದಲ್ಲಿದ್ದ ನಾಗೇಶ್ : ಬಂಧನದ ವೇಳೆ ಆರೋಪಿ ನಾಗೇಶ್ ಸ್ವಾಮಿಜಿ ವೇಶದಲ್ಲಿದ್ದ ಎನ್ನಲಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಖಾವಿ ಪಂಚೆ ಧರಿಸಿದ್ದ ಆರೋಪಿ ನಾಗೇಶ್ ಕೈಗೆ ಪೊಲೀಸರು ಬೇಡಿ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೇರೆ ಬೇರೆ ಯುವತಿಯರಿಗೂ ಪ್ರೀತಿಸಲು ಪೀಡಿಸುತ್ತಿದ್ದ ನಾಗೇಶ್ : ಈ ಹಿಂದೆ ಕೂಡ ನಾಗೇಶ್ ಬೇರೆ ಬೇರೆ ಯುವತಿಯರನ್ನ ಪ್ರೀತಿಸುವಂತೆ ಕಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಾಗೇಶ್ ಮೂಲತಃ ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂ ನಿವಾಸಿಯಾಗಿದ್ದು, 7 ವರ್ಷದ ಹಿಂದೆ ಬೆಂಗಳೂರಿಗೆ ಬಂದು ಯುವತಿ ದೊಡ್ಡಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ. ಪ್ರೀತಿ ಮಾಡು ಅಂತಾ ಯುವತಿಯ ಹಿಂದೆ ಬಿದ್ದಿದ್ದ. ಮನೆ ಖಾಲಿ ಮಾಡಿಸಿದ ಬಳಿಕ ತಮ್ಮ ಸ್ವಂತ ಊರು ಕೊಡಿಯಾಲಂಗೆ ಹೋಗಿದ್ದ.
ಎರಡು ವರ್ಷದ ಹಿಂದೆ ಮತ್ತೋರ್ವ ಯುವತಿಗೂ ಹೀಗೆ ಕಾಟ ಕೊಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೊಡಿಯಾಲಂನಲ್ಲಿರುವ ತಮ್ಮ ಮನೆ ಪಕ್ಕದಲ್ಲಿದ್ದ ಯುವತಿಯನ್ನು ಪೀಡಿಸುತ್ತಿದ್ದನಂತೆ. ಆತನ ಕಾಟ ತಾಳಲಾರದೇ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಳು. ಯುವತಿ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಂದು ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ನಂತರ ಆ ಯುವತಿಯನ್ನ ಬೇರೆ ಹುಡುಗನಿಗೆ ಮದುವೆ ಮಾಡಿಕೊಡಲಾಗಿತ್ತು. ನಂತರ ಮತ್ತೆ ಕೊಡಿಯಾಲಂ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಮತ್ತೆ ಬೆಂಗಳೂರಿಗೆ ಬಂದು ಅದೇ ಯುವತಿಗೆ ಪ್ರೀತಿಸುವಂತೆ ಪೀಡಿಸಿದ್ದ. ಪ್ರೀತಿ ತಿರಸ್ಕರಿಸಿದಕ್ಕೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದ.
Discover more from Coastal Times Kannada
Subscribe to get the latest posts sent to your email.
Discussion about this post