ಬೆಂಗಳೂರು: ಮೂತ್ರವಿಸರ್ಜನೆ ನೆಪದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆ್ಯಸಿಡ್ ನಾಗನ ಕಾಲಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹೊಡೆದಿದ್ದಾರೆ. ಬೆಂಗಳೂರಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿಸಿ ಆರೋಪಿ ನಾಗ ಪರಾರಿಯಾಗಿದ್ದ. 16 ದಿನಗಳ ಬಳಿಕ ನಾಗನನ್ನು ಪೊಲೀಸರು ಬಂಧಿಸಿ ಕರೆತರುವಾಗ ಈ ಘಟನೆ ನಡೆದಿದೆ. ಆರೋಪಿ ಬಲಗಾಲಿಗೆ ಗುಂಡು ತಗುಲಿದ್ದು, ರಾಜರಾಜೇಶ್ವರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯಿಂದ ಹಲ್ಲೆಗೊಳಗಾದ ಕಾನ್ಸ್ಟೇಬಲ್ ಮಹಾದೇವಯ್ಯ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರೀತಿಗೆ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್ ಹಾಕಿ ವಿಕೃತಿ ಮೆರೆದಿದ್ದ ನಾಗೇಶ್ ತಮಿಳುನಾಡಿನ ತಿರುಮಣ್ಣಾಮಲೈಯಲ್ಲಿರುವ ಆಶ್ರಮವೊಂದರಲ್ಲಿ ಭಕ್ತನಾಗಿ ತಲೆಮರೆಸಿಕೊಂಡಿದ್ದ. ಈತನ ಪತ್ತೆಗಾಗಿ ಪೊಲೀಸರಿಗಾಗಿ ತೀವ್ರ ಶೋಧ ನಡೆಸಿದಾಗ ಆಶ್ರಮವೊಂದರಲ್ಲಿ ಇರುವ ಬಗ್ಗೆ ಸುಳಿವು ದೊರೆತಿತ್ತು. ಈ ಸಂಬಂಧ ಪರಿಶೀಲನೆ ನಡೆಸಿದಾಗ ಆರೋಪಿ ಖಾವಿ ವೇಷದಲ್ಲಿ ಅಡಗಿರುವುದು ಗೊತ್ತಾಗಿತ್ತು. ಬಳಿಕ ಆತನನ್ನು ಪೊಲೀಸರು ಬಂಧಿಸಿ ರಾತ್ರಿ ನಗರಕ್ಕೆ ಕರೆದುಕೊಂಡು ಬರುವಾಗ ಕೆಂಗೇರಿ ನೈಸ್ ರಸ್ತೆ ಬಳಿ ಮೂತ್ರವಿಸರ್ಜನೆಗಾಗಿ ಗಾಡಿ ನಿಲ್ಲಿಸುವಂತೆ ಮನವಿ ಮಾಡಿದ್ದ. ಇದಕ್ಕೆ ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಬಳಿಕ ಒತ್ತಾಯದ ಮೇರೆಗೆ ಬೆಂಗಳೂರು ಸಿಟಿಯ ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಗೇಶ್ ಯತ್ನಿಸಿದ್ದ. ಆತನನ್ನ ಹಿಡಿಯಲು ಹೋದ ಕಾನ್ಸ್ಟೇಬಲ್ ಮಹಾದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿಯನ್ನ ಹಿಡಿಯಲು ಗಾಳಿಯಲ್ಲಿ ಒಮ್ಮೆ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದ್ರೂ ತಪ್ಪಿಸಿಕೊಳ್ಳಲು ಮುಂದಾದ ಆರೋಪಿ ಬಲಗಾಲಿಗೆ ಇನ್ಸ್ಪೆಕ್ಟರ್ ಪ್ರಶಾಂತ್ ಸರ್ವಿಸ್ ಪಿಸ್ತೂಲ್ನಿಂದ ಗುಂಡು ಹೊಡೆದು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post