ಮಂಗಳೂರು, ಮೇ 13 : ಮೂಡುಬಿದ್ರಿ ನಿವಾಸಿ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ವಿವಿಧೆಡೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಲ್ಲದೆ, ಆಕೆಯಿಂದ ಹಣ ಸುಲಿಗೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತ ಮೂಡಬಿದ್ರೆಯ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಹಣ ಸುಲಿಗೆ ಮಾಡಿದ್ದಾನೆ. ಮಾದಕ ವಸ್ತುಗಳನ್ನು ಬಲವಂತವಾಗಿ ಸೇವನೆ ಮಾಡಿಸಿ ಆಕೆಯ ನಗ್ನ ಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದು, ಬಳಿಕ ಬ್ಲ್ಯಾಕ್ಮೇಲ್ ಮಾಡಿ ರೂ.1,50,000 ಸುಲಿಗೆ ಮಾಡಿದ್ದ. ವಿವಿಧ ಕಡೆಗಳಲ್ಲಿನ ಲಾಡ್ಜ್ಗಳಿಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಳು.
ಮಂಗಳೂರು ಮಹಿಳಾ ಪೊಲೀಸ್ ಠಾಣೆಯಿಂದ ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಳ್ಳುವಂತೆ ಕಡತವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಯುವತಿಯನ್ನು ನಗರದ ಸೇರಿ ಪುಣೆ, ಮುಂಬೈನ ವಿವಿಧ ಲಾಡ್ಜ್ಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ ಎಂದು ದೂರಲಾಗಿದೆ. ಆರೋಪಿಯು ಈ ಹಿಂದೆ 2019 ಹಾಗೂ 2020ರಲ್ಲಿ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎರಡು ಮಾದಕ ವಸ್ತು ಮಾರಾಟದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಯುವತಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.