ಮಂಗಳೂರು, ಮೇ 13: ಮಾಜಿ ಸಚಿವ, ಹಾಲಿ ಶಾಸಕ, ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶದ ಅಧಿಕೃತ ಘೋಷಣೆ ಬಾಕಿಯಿದೆ.
ಯು.ಟಿ.ಖಾದರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಸತೀಶ್ ಕುಂಪಲರನ್ನು 22,700 ಮತಗಳ ಅಂತರದಿಂದ ಸೋಲಿಸಿ 5ನೇ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಲ್ಲಿ ಓರ್ವರಾಗಿರುವ ಯು.ಟಿ.ಖಾದರ್ ಕಳೆದ ಬಾರಿಗಿಂತ 2,961 ಅಧಿಕ ಮತಗಳಿಂದ ಜಯ ಗಳಿಸಿದ್ದಾರೆ.
ಮತ ಎಣಿಕೆಯ ಪ್ರಥಮ ಸುತ್ತಿನಿಂದಲೇ ಮುನ್ನಡೆ ಪಡೆದಿದ್ದ ಯು.ಟಿ.ಖಾದರ್ ಆನಂತರದ ಪ್ರತೀ ಸುತ್ತಿನಲ್ಲೂ ಮತಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿ ಅಂತಿಮವಾಗಿ 22,700 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದರು.
2007ರ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಯು.ಟಿ.ಖಾದರ್ ಮತ್ತೆ ಹಿಂದಿರುಗಿ ನೋಡಲೇ ಇಲ್ಲ. 2008, 2013, 2018ರಲ್ಲಿ ಗೆದ್ದಿದ್ದ ಯು.ಟಿ.ಖಾದರ್ ಈ ಬಾರಿಯೂ ಗೆಲುವಿನ ನಗೆ ಬೀರಿದ್ದಾರೆ. 2018ರ ಚುನಾವಣೆಯಲ್ಲಿ ದ.ಕ. ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಮಂಗಳೂರು ಕ್ಷೇತ್ರದಲ್ಲೊ ಮಾತ್ರ ಕಾಂಗ್ರೆಸ್ ಗೆದ್ದಿತ್ತು.