ಹುಬ್ಬಳ್ಳಿ : ವಂಚಕನೋರ್ವ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ 60 ಲಕ್ಷ ರೂ. ಪಡೆದು ಕೋಟಾ ನೋಟು ನೀಡಿ ವಂಚಿಸಿದ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೈಸೂರು ಮೂಲದ ಆರೋಪಿ ಮಹಮ್ಮದ್ ಆಸೀಪ್ ವಂಚಕ. ಆರೋಪಿ ಮಹಮ್ಮದ್ ಆಸೀಪ್ ಪುಣೆ ಮೂಲದ ಮಹಿಳೆಗೆ ಕಟ್ಟಡ ಕೆಲಸಕ್ಕಾಗಿ ಕಡಿಮೆ ಬಡ್ಡಿದರಲ್ಲಿ ಐವತ್ತು ಕೋಟಿ ರೂಪಾಯಿ ಹಣ ಸಾಲ ಕೊಡಿಸುವುದಾಗಿ ಹೇಳಿದ್ದಾನೆ. ಪ್ರೊಸೆಸಿಂಗ್ ಶುಲ್ಕ ಅಂತ ಮಹಿಳೆಯಿಂದ 60 ಲಕ್ಷ ರೂ. ಹಣ ಪಡೆದಿದ್ದಾನೆ. ನಂತರ, ಮೊದಲ ಕಂತಿನ ರೂಪದಲ್ಲಿ ಮಹಿಳೆಗೆ 1.87 ಕೋಟಿ ರೂ. ನೀಡಿದ್ದಾನೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ ಬ್ಯಾಗ್ ತೆರೆದು ನೋಡಿದಾಗ, ನಕಲಿ ನೋಟುಗಳು ಕಂಡಿದ್ದು, ಆಘಾತಕ್ಕೆ ಒಳಗಾಗಿದ್ದಾರೆ.
ಮಹಮ್ಮದ್ ಆಸೀಪ್, ಸುಧೀರ್ ಮೆಹ್ತಾ ಅಂತ ಎಲ್ಲರಿಗೂ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದನು. ಒಂದು ವರ್ಷದ ಹಿಂದೆ ಮೈಸೂರಿಗೆ ಬಂದಿದ್ದ ಪುಣಾ ಮೂಲದ ಓರ್ವ ಮಹಿಳೆಗೆ ಆರೋಪಿ ಮಹಮ್ಮದ್ ಆಸೀಪ್ ಪರಿಚಯವಾಗಿದ್ದನು. ಆಗ ಮಹಿಳೆಗೆ, ಮಹಮ್ಮದ್ ಆಸೀಪ್ ತಾನು ಅನೇಕ ಉದ್ಯಮಿಗಳಿಗೆ ಸಾಲ ಕೊಡಿಸುತ್ತೇನೆ, ತನಗೆ ದೊಡ್ಡ ದೊಡ್ಡ ಪೈನಾನ್ಸ್ರಗಳು ಪರಿಚಯವಿದ್ದಾರೆ ಅಂತ ಹೇಳಿದ್ದನು. ಈತನ ಮಾತನ್ನು ನಂಬಿದ್ದ ಮಹಿಳೆ, ನನ್ನ ಮಗಳು ಮುಂಬೈನಲ್ಲಿ ಕಟ್ಟಡದ ಕಾಮಗಾರಿ ಆರಂಭಿಸುವವಳಿದ್ದಾಳೆ, ಅದಕ್ಕಾಗಿ ಐವತ್ತು ಕೋಟಿ ರೂಪಾಯಿ ಸಾಲ ಬೇಕು ಎಂದು ಹೇಳಿದ್ದರಂತೆ.
ಆಗ, ಮಹಮ್ಮದ್ ಆಸೀಪ್ ಸಾಲ ಕೊಡಿಸುವುದಾಗಿ ಹೇಳಿದ್ದನಂತೆ. ಐವತ್ತು ಕೋಟಿ ರೂಪಾಯಿಗೆ ಪ್ರೊಸೆಸಿಂಗ್ ಚಾರ್ಜ್ ಅಂತ 60 ಲಕ್ಷ ರೂಪಾಯಿ ನೀಡಬೇಕು ಅಂತ ಹೇಳಿದ್ದನಂತೆ. ಈತನ ಮಾತನ್ನು ನಂಬಿದ್ದ ಮಹಿಳೆ, ಕೆಲ ದಿನಗಳ ಹಿಂದೆ ಮಹಮ್ಮದ್ ಆಸೀಪ್ಗೆ 60 ಲಕ್ಷ ಹಣ ನೀಡಿದ್ದರಂತೆ. ಸಾಲದ ಮೊದಲ ಕಂತಿನ ಭಾಗವಾಗಿ, ನಿಮಗೆ 2ಕೋಟಿ ಹಣ ನೀಡುತ್ತೇನೆ, ಹುಬ್ಬಳ್ಳಿಗೆ ಬನ್ನಿ ಅಂತ ಮಹಮ್ಮದ್ ಆಸೀಪ್ ಕರೆದಿದ್ದನಂತೆ. ಈತನ ಮಾತು ನಂಬಿದ್ದ ಮಹಿಳೆ, ತನ್ನ ಜೊತೆ ಕೆಲ ಪರಿಚಿತರನ್ನು ಕರೆದುಕೊಂಡು ಜೂನ್ 5 ರಂದು ಹುಬ್ಬಳ್ಳಿಗೆ ಬಂದಿದ್ದರಂತೆ.
ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೋಟೆಲ್ವೊಂದರ ಮುಂದೆ ಎರಡು ಸೂಟ್ ಕೇಸ್ನಲ್ಲಿ ಹಣ ತುಂಬಿ ಮಹಮ್ಮದ್ ಆಸೀಪ್ ಮಹಿಳೆಗೆ ನೀಡಿದ್ದನಂತೆ. ಸದ್ಯ ನಿಮಗೆ 1 ಕೋಟಿ 87 ಲಕ್ಷದ 45 ಸಾವಿರ ಹಣ ನೀಡಿದ್ದೇನೆ. ಉಳಿದ 48 ಕೋಟಿಯನ್ನು ಮತ್ತೆ ಕೊಡಿಸುತ್ತೇನೆ ಅಂತ ಹೇಳಿದ್ದನಂತೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ, ಸೂಟ್ಕೇಸ್ನಲ್ಲಿದ್ದ ಹಣ ಪರಿಶೀಲಿಸದೆ ಅದನ್ನು ತಾವು ಉಳಿದುಕೊಂಡಿದ್ದ ಹೋಟೆಲ್ಗೆ ತಗೆದುಕೊಂಡು ಹೋಗಿದ್ದರು. ನಂತರ ಆ ಹಣವನ್ನು ಹೇಗೆ ಮುಂಬೈಗೆ ತಗೆದುಕೊಂಡು ಹೋಗುವುದು ಅಂತ ಯೋಚನೆ ಮಾಡಿ, ಹಣದ ಬ್ಯಾಗ್ ತಗೆದು ನೋಡಿದಾಗ ಮಹಮ್ಮದ್ ಆಸೀಪ್ ನೀಡಿರುವುದು ಅಸಲಿ ನೋಟ್ ಅಲ್ಲ, ನಕಲಿ ನೋಟು ಎಂದು ಗೊತ್ತಾಗಿದೆ.
ಮಹಮ್ಮದ್ ಆಸೀಪ್, ಮಹಿಳೆಗೆ ನೀಡಿದ್ದ 1.87 ಕೋಟಿ ಹಣದಲ್ಲಿ, ಐದು ಸಾವಿರ ರೂ. ನೋಟುಗಳು ಮಾತ್ರ ಅಸಲಿಯಾಗಿದ್ದವು. ಮಹಮ್ಮದ್ ಆಸೀಪ್ ಹಣದ ಬಂಡಲ್ ಮೇಲೆ ಮಾತ್ರ 500 ಬೆಲೆಯ ಒಂದೊಂದು ಅಸಲಿ ನೋಟು ಇಟ್ಟಿದ್ದನು. ಉಳಿದ ಎಲ್ಲ ನೋಟುಗಳನ್ನು ಕೋಟಾ ನೋಟು ಇಟ್ಟಿದ್ದನು.
ಕೋಟಾ ನೋಟು ನೋಡಿ ಶಾಕ್ ಆಗಿದ್ದ ಮಹಿಳೆ, ಹುಬ್ಬಳ್ಳಿ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಆರೋಪಿ ಪತ್ತೆಗೆ ಮುಂದಾದರು. ಖಚಿತ ಮಾಹಿತಿ ಮೇರೆಗೆ ಮುರ್ಡೇಶ್ವರದಲ್ಲಿ ಆರೋಪಿಯನ್ನು ಪತ್ತೆ ಮಾಡಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post