ಬೆಂಗಳೂರು: ವಕೀಲಿ ವೃತ್ತಿಗಾಗಿ ಕಚೇರಿಗೆ ಸೇರಿದ ಕಾನೂನು ವಿದ್ಯಾರ್ಥಿನಿ (ಇಂಟರ್ನಿ) ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ವಕೀಲ ಕೆ.ಎಸ್.ಎನ್. ರಾಜೇಶ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಸಂಬಂಧ ಮಂಗಳೂರು ಮಹಿಳಾ ಠಾಣೆಯ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು 3ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ರಾಜೇಶ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ಮನವಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ತಳ್ಳಿಹಾಕಿದೆ.
‘ಪ್ರಶಿಕ್ಷಣಾರ್ಥಿಯಾಗಿ ವಕೀಲರ ಕಚೇರಿಗೆ ಸೇರಿದ ನಿಷ್ಕಪಟ ಮನಸ್ಸಿನ ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಈ ರೀತಿಯ ಭಯಾನಕ ಕೃತ್ಯ ನಡೆಸಿದರೆ, ಅದು ಆಕೆಯ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹಾಗಾಗಿ, ಅರೋಪಿ ಸಂಪೂರ್ಣ ವಿಚಾರಣೆ ಎದುರಿಸಿ, ದೋಷಮುಕ್ತನಾಗಿ ಬರಲಿ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಂಗಳೂರಿನ ಕಾನೂನು ವಿದ್ಯಾರ್ಥಿನಿಯೊಬ್ಬಳು ವಕೀಲ ರಾಜೇಶ್ ಅವರ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. ‘ನನ್ನ ಮೇಲೆ ರಾಜೇಶ್ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ನೀಡಿದ್ದರು. ಈ ರೀತಿಯ ಘಟನೆ ಆಗಿರುವುದು ಆಕೆಯ ವೃತ್ತಿ ಮತ್ತು ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಲ್ಲಿ ಆರೋಪಿ ವಕೀಲ ಗುರುವಿನ ಸ್ಥಾನದಲ್ಲಿರುತ್ತಾನೆ. ನಂಬಿಕೆಯಿಟ್ಟು ವಿದ್ಯಾರ್ಥಿನಿ ಆತನ ಬಳಿ ಕಲಿಯಲು ಬರುತ್ತಾಳೆ. ಇಂತಹ ಸಮಯದಲ್ಲಿ ಇಡೀ ಪ್ರಕರಣವನ್ನು ರದ್ದುಗೊಳಿಸುವುದು ಈ ರೀತಿಯ ದುಷ್ಕೃತ್ಯಗಳನ್ನು ಬೆಂಬಲಿಸಿದಂತಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
Discover more from Coastal Times Kannada
Subscribe to get the latest posts sent to your email.
Discussion about this post