ಮಂಗಳೂರು: ಮೂಲತಃ ಬಿಜಾಪುರದವರಾದ ಪರಶುರಾಮನ ಹೆತ್ತವರು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿದ್ದಾರೆ ಹುಟ್ಟಿದ ಒಂದು ವರ್ಷದವರೆಗೆ ಸರಿಯಾಗಿಯೇ ಇದ್ದ ಈ ಪರುಶುರಾಮನಿಗೆ ಜ್ವರಕ್ಕೆ ವೈದರೊಬ್ಬರು ನೀಡಿದ ಇಂಜೆಕ್ಷನ್ ನಿಂದ ಒಂದು ಕಾಲು ಸಂಪೂರ್ಣ ಸ್ವಾಧೀನ ಕಳೆದುಕೊಂಡಿತು. ಮತ್ತೊಂದು ಕಾಲು ಕೊಂಚ ಬಲವಿದ್ದರೂ, ಇವರು ಜೀವನಪರ್ಯಂತದ ಅಂಗವೈಕಲ್ಯಕ್ಕೆ ತುತ್ತಾದರು. ಬಾಲ್ಯದಿಂದಲೇ ಒಂದು ಕಾಲಿನ ಸ್ವಾಧೀನ ಸಂಪೂರ್ಣ ಕಳೆದು ಕೊಂಡಿದ್ದರೂ ಛಲ ಬಿಡದೆ ಜೀವನ ನಡೆಸಲು ಫುಡ್ ಡೆಲಿವರಿ ಬಾಯ್ ಆಗಿ ಪ್ರತೀ ನಿತ್ಯ ಕಾಯಕ ನಿರ್ವಹಿಸುತ್ತಿದ್ದಾರೆ ಮಂಗಳೂರಿನ ಪರಶುರಾಮ್.
ಮೂಲತಃ ಬಿಜಾಪುರದ ಪರಶುರಾಮ್ ಅವರ ಕುಟುಂಬ ಸುಮಾರು 30 ವರ್ಷಗಳಿಂದ ಮಂಗಳೂರಿನಲ್ಲಿದೆ. ಅಪ್ಪ ಮಡಿವಾಳಪ್ಪ ಅವರಿಗೆ ಬೈಕಂಪಾಡಿ ಬಳಿ ಸಣ್ಣ ಗೂಡಂಗಡಿ ಇದೆ. ಅಮ್ಮ ರೇಣುಕಾ ಅಲ್ಲೇ ಸಹಾಯ ಮಾಡುತ್ತಿದ್ದಾರೆ. ಈ ದಂಪತಿಗೆ 7 ಮಂದಿ ಮಕ್ಕಳು. ಆರ್ಥಿಕವಾಗಿ ಹಿಂದುಳಿದ ಕಾರಣ ಶಾಲೆಯ ಫೀಸ್, ದಿನನಿತ್ಯದ ಖರ್ಚು ಸಹಿತ ಜೀವನದ ಬಂಡಿ ಸಾಗಿಸಲು ಕಷ್ಟಪಡುತ್ತಿದ್ದಾರೆ. ಇದೀಗ ಪರಶುರಾಮ್ ಅವರು ದುಡಿದು ಬಿಡಿಗಾಸು ಸಂಪಾದಿಸುತ್ತಿದ್ದು, ಇದುವೇ ಮನೆಗೆ ಆಧಾರವಾಗಿದೆ.
ಚಿಕ್ಕಂದಿನಲ್ಲೇ ಕಾಲು ಸ್ವಾಧೀನ ಕಳೆದುಕೊಂಡ ಪರಶುರಾಮ್ ಅವರ ಒಂದು ಕಾಲು ಊರಲೂ ಸಾಧ್ಯವಾಗುತ್ತಿಲ್ಲ. ಮತ್ತೂಂದು ಕಾಲು ಮತ್ತು ಕೈಯನ್ನು ಊರಿಯೇ ಇವರು ಚಲಿಸುತ್ತಾರೆ. ಹೀಗೇ ಕಷ್ಟ ಪಟ್ಟು ಸ್ಕೂಟರ್ ಏರಿ ಸ್ವಿಗ್ಗಿ, ಝೋಮ್ಯಾಟೋ ಕಂಪೆನಿಯ ಮೂಲಕ ಮನೆ ಮನೆಗೆ ಫುಡ್ ಡೆಲಿವರಿ ಮಾಡುತ್ತಿದ್ದಾರೆ. ಹೀಗಿದ್ದಾಗ ಕೆಲವು ಬಾರಿ ಫ್ಲ್ಯಾಟ್‌ಗಳಲ್ಲಿ ಏಳೆಂಟು ಮಾಳಿಗೆ ಮೆಟ್ಟಿಲುಗಳಲ್ಲೇ ನಡೆಯುವುದುಂಟು. ಬೆಳಗ್ಗೆ 6 ಗಂಟೆಯಿಂದ ಆರಂಭವಾಗಿ ರಾತ್ರಿಯವರೆಗೂ ಕೆಲಸ ನಿರ್ವಹಿಸುತ್ತಿದ್ದಾರೆ. ಪೆಟ್ರೋಲ್, ಸ್ಕೂಟರ್‌ನ ನಿರ್ವಹಣೆಗೇ ಆದಾಯದ ಹೆಚ್ಚಿನ ಹಣ ಖರ್ಚಾಗುತ್ತದೆ. ಆದರೂ ಅವರು ಈವರೆಗೆ ಛಲ ಬಿಟ್ಟಿಲ್ಲ
9ನೇ ತರಗತಿಯವರೆಗೆ ಶಿಕ್ಷಣ ಪಡೆದ ಪರಶುರಾಮ ಆ ಬಳಿಕ ಮನೆಯಲ್ಲಿ ಬಡತನವಿದ್ದರಿಂದ ಭಿಕ್ಷಾಟನೆಗಿಳಿದರು. ಆದರೆ ಭಿಕ್ಷೆ ಬೇಡುವ ಕಾಯಕ ಇವರಿಗೆ ಹಿಂಸೆಯೆನಿಸಿ ಒಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ದುಡಿಯಲಾರಂಭಿಸಿದರು. ಇದೀಗ ಸೆಕ್ಯುರಿಟಿ ಕಾಯಕದ ಜೊತೆ ಫುಡ್ ಡೆಲಿವರಿ ಕೆಲಸವನ್ನು ಮಾಡುತ್ತಿದ್ದಾರೆ. ಪರಶುರಾಮ್‌ನ ಫುಡ್ ಡೆಲಿವರಿ ಕೆಲಸಕ್ಕೆ ಮಂಗಳೂರಿನ ಜನರು ಸಹ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲವೂ ಸರಿಯಿದ್ದು, ಏನನ್ನೂ ಸಾಧಿಸದಿದ್ದವರಿಗೆ ಪರಶುರಾಮ ಮಾದರಿಯಾಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post