ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್ (34) ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಭಾನುವಾರ ರಾತ್ರಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದೆ. ಇದರ ಹಿಂದೆ ಗೋಲ್ಡ್ ಮಾಫಿಯಾ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.
ನಿನ್ನೆ ರಾತ್ರಿ ಉಳ್ಳಾಲದ ಮುಕ್ಕಚ್ಚೇರಿ ಕಡಪ್ಪರ ನಿವಾಸಿ ಸಮೀರ್ ತನ್ನ ತಾಯಿ, ಪತ್ನಿ, ಇಬ್ಬರು ಪುಟ್ಟ ಮಕ್ಕಳೊಂದಿಗೆ ಕಾರಲ್ಲಿ ಕಲ್ಲಾಪು ಬಳಿಯ ಫಾಸ್ಟ್ ಫುಡ್ ಸೆಂಟರ್ ವೊಂದಕ್ಕೆ ಉಪಾಹಾರಕ್ಕೆ ತೆರಳಿದ್ದ ವೇಳೆ ಮತ್ತೊಂದು ಕಾರಲ್ಲಿ ಹಿಂಬಾಲಿಸಿ ಬಂದ ತಂಡವೊಂದು ತಾಯಿಯ ಎದುರಲ್ಲೇ ಮಾರಕಾಸ್ತ್ರಗಳನ್ನ ಹಿಡಿದು ಅಟ್ಟಾಡಿಸಿದ್ದಾರೆ. ತಪ್ಪಿಸಿಕೊಳ್ಳಲು ಸಮೀರ್ ರೈಲ್ವೇ ಟ್ರ್ಯಾಕ್ ಕಡೆ ಓಡಿದಾಗ ದುಷ್ಕರ್ಮಿಗಳು ಆತನನ್ನ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ತಾವು ಬಂದಿದ್ದ ಉಡುಪಿ ನೋಂದಣಿಯ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ಸಮೀರ್ ಉಳ್ಳಾಲದ ಟಾರ್ಗೆಟ್ ಗ್ಯಾಂಗ್ ಲೀಡರ್ ಆಗಿದ್ದ ಇಲ್ಯಾಸ್ ಕೊಲೆ ಸೇರಿದಂತೆ ಕೊಲೆಯತ್ನ, ದರೋಡೆ, ಮಾದಕ ವಸ್ತುಗಳ ಸಾಗಾಟ ಹೀಗೆ ಅನೇಕ ಪ್ರಕರಣಗಳನ್ನ ಎದುರಿಸುತ್ತಿದ್ದ. ತಿಂಗಳ ಹಿಂದೆ ದರೋಡೆ ಪ್ರಕರಣವೊಂದರಲ್ಲಿ ಮತ್ತೆ ಸಮೀರ್ ತನ್ನ ಸಹಚರರೊಂದಿಗೆ ಜೈಲು ಸೇರಿದ್ದ. ಮೃತ ಸಮೀರ್ ಪತ್ನಿ, ಎರಡು ವರುಷದ ಹೆಣ್ಣು, ನಾಲ್ಕು ತಿಂಗಳ ಗಂಡು ಮಗು, ತಾಯಿ, ಸಹೋದರ, ಸಹೋದರಿಯರನ್ನ ಅಗಲಿದ್ದಾರೆ.
ಆರು ತಿಂಗಳ ಹಿಂದೆ ಉಪ್ಪಳದ ನಟೋರಿಯಸ್ ವ್ಯಕ್ತಿಯೊಬ್ಬ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವೇಳೆ ಮಾಹಿತಿ ಪಡೆದು ಮಧ್ಯವರ್ತಿಯನ್ನು ಅಪಹರಿಸಿ ಕೋಟಿ ರೂ. ಮೌಲ್ಯದ ಚಿನ್ನವನ್ನು ಎಗರಿಸಿದ್ದ. ಇದೇ ವಿಚಾರದಲ್ಲಿ ಜೈಲಿನಲ್ಲಿ ಸಮೀರ್ ಮೇಲೆ ದಾಳಿಯೂ ನಡೆದಿತ್ತು. ಚಿನ್ನ ಎಗರಿಸಿದ ದ್ವೇಷದಲ್ಲೇ ಉಪ್ಪಳದ ಗ್ಯಾಂಗ್ ಸುಪಾರಿ ಕಿಲ್ಲರ್‌ಗಳಿಂದ ಸಮೀರ್‌ನನ್ನು ಕೊಲೆಗೈದಿರುವ ಸಾಧ್ಯತೆಯಿದೆ ಎಂಬ ಅನುಮಾನಗಳು ದಟ್ಟವಾಗಿದೆ. ದುಷ್ಕರ್ಮಿಗಳು ಪರಾರಿಯಾದ ಕಾರು ಉಡುಪಿಯ ನೋಂದಣಿಯಲ್ಲಿತ್ತು ಎನ್ನುವುದನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ಸಮೀರ್ ಕೊಲೆಗೆ ಜೈಲಲ್ಲೇ ಸ್ಕೆಚ್..!? ಸಮೀರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಶಯಾಸ್ಪದ ವ್ಯಕ್ತಿಗಳಾಗಿ ಗುರುತಿಸಿಕೊಂಡ ಟಾರ್ಗೆಟ್ ಇಲ್ಯಾಸ್ ಸಂಬಂಧಿಕ ಹಾಗೂ ಆತನ ಮಿತ್ರನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಸಮೀರ್ ಮತ್ತು ತಂಡವು ದರೋಡೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದು ಕೆಲ ದಿನಗಳ ಹಿಂದಷ್ಟೆ ಸಮೀರ್ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಒಂದು ವರ್ಷದ ಹಿಂದೆಯಷ್ಟೇ ಈತ ವಿವಾಹವಾಗಿದ್ದ. ಸಮೀರ್‌ನನ್ನು ಜೈಲಿನಲ್ಲಿ ಕಳೆದ ತಿಂಗಳು ತಂಡವೊಂದು ಕೊಲೆಗೆ ಯತ್ನಿಸಿದ್ದು, ಅಲ್ಲಿ ಸಮೀರ್ ಬಚಾವಾಗಿದ್ದ ಎಂದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post