ಉಡುಪಿ : ಉದ್ಯಮಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ರೂಪಾಯಿ ವಂಚನೆ ನಡೆಸಿದ ಪ್ರಮುಖ ಆರೋಪಿ ಹಿಂದೂ ಸಂಘಟನೆಗಳ ನಾಯಕಿ , ವಾಗ್ಮಿ ಚೈತ್ರ ಕುಂದಾಪುರಳನ್ನು ಪೊಲೀಸ್ ರು ಸಿನಿಮೀಯ ಶೈಲಿಯಲ್ಲಿ ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ, ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಸಿನಿಮಿಯ ಶೈಲಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ , ಬೆಂಗಳೂರಿನ ಶೆಫ್ಟಾಕ್ ಫುಡ್ & ಹಾಸ್ಪಿಟಾಲಿಟಿ ಪ್ರೈ.ಲಿ ನ ಸಂಸ್ಥಾಪಕ ಗೋವಿಂದ ಬಾಬು ಪೂಜಾರಿ ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರಿಗೆ ಟಿಕೇಟ್ ಕೊಡಿಸುವ ನೆಪದಲ್ಲಿ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಟಿಕೆಟ್ ಕೊಡಿಸುವುದಾಗಿ ನಾಲ್ಕೈದು ಜನರು, ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದಾರೆ. ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರಿನ ಬಿಜೆಪಿ ಟಿಕೇಟ್ ಕೊಡಿಸುವುದಾಗಿ ಸುಮಾರು ಮೂರು ಹಂತದಲ್ಲಿ ಏಳು ಕೋಟಿ ರೂಪಾಯಿ ಪೀಕಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು.
ಹಿಂದು ಪರ ಸಂಘಟನೆಗಳಲ್ಲಿ ಪ್ರಖರ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರ ಕುಂದಾಪುರ, ಆರೆಸ್ಸೆಸ್ ನಾಯಕರ ನಿಕಟವರ್ತಿಯೆಂದು ಹೇಳಿಕೊಂಡು ಮಹಾವಂಚನೆ ಎಸಗಿದ್ದರು. ನಾಲ್ಕೈದು ಮಂದಿ ಸೇರಿ ಬೃಹನ್ನಾಟಕ ಹೆಣೆದಿದ್ದು ಉದ್ಯಮಿ ಅದರೊಳಗೆ ಬಿದ್ದು ಒದ್ದಾಡುವಂತಾಗಿತ್ತು. ಆರ್ ಎಸ್ ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಸೃಷ್ಟಿ ಮಾಡಿದ್ದ ಚೈತ್ರ ಅಂಡ್ ಟೀಮ್, ವ್ಯವಸ್ಥಿತ ರೀತಿಯಲ್ಲಿ ವಂಚನೆ ಎಸಗಿದ್ದರು. ಈಗ ಚೈತ್ರಾ ಜೊತೆಗಿದ್ದ ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ವಂಚನೆ ಪ್ರಕರಣದಲ್ಲಿ ಈವರೆಗೆ ಬೆಂಗಳೂರು ಸಿಸಿಬಿ ಪೊಲೀಸರು ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ. ಚೈತ್ರಾ ಕುಂದಾಪುರ ಜೊತೆಗೆ ಪ್ರಮುಖ ನಾಟಕಕಾರನಾಗಿದ್ದ ಶಿವಮೊಗ್ಗ ಮೂಲದ ಗಗನ್ ಕಡೂರು, ಶ್ರೀಕಾಂತ ನಾಯಕ್, ಪ್ರಸಾದ್ ಎಂಬವರು ಪೊಲೀಸ್ ವಶದಲ್ಲಿದ್ದಾರೆ.
Discussion about this post